ನಿಮ್ಮ ಊರಿಗೆ ಸಿಎಂ ಬರುವುದು ಯಾವಾಗ? – ಇಲ್ಲಿದೆ ಕುಮಾರಣ್ಣನ ಗ್ರಾಮ ವಾಸ್ತವ್ಯದ ಫುಲ್ ಡಿಟೇಲ್ಸ್…!

ತಮ್ಮದು ವಿಧಾನ ಸೌಧದ ಮೂರನೇ ಮಹಡಿಯಲ್ಲಿ ಕುಳಿತು ಆಡಳಿತ ನಡೆಸುವಂತ ಸರ್ಕಾರವಲ್ಲ. ತಮ್ಮದು ಜನರ ಜೊತೆ ಬೆರೆತು, ಅವರ ನಾಡಿ ಬಡಿತ ಗ್ರಹಿಸಿ, ಅವರ ಹಿತಕ್ಕಾಗಿ ಶ್ರಮಿಸುವ ಸರ್ಕಾರ ಎಂದು 2006 ರಲ್ಲಿ ಹೆಚ್ ಡಿ ಕುಮಾರಸ್ವಾಮಿ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗಲೇ ಕೇವಲ ಇಪ್ಪತ್ತು ತಿಂಗಳ ಅವಧಿಯಲ್ಲಿ ಬರೋಬ್ಬರಿ 48 ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳನ್ನು ಪೂರೈಸಿ, ಭೇಟಿ ನೀಡಿದ ಗ್ರಾಮಗಳಲ್ಲಿ ಪ್ರಸಿದ್ಧ ‘ಜನತಾ ದರ್ಶನ’ ನಡೆಸಿ, ಜನಗಳ ಕಷ್ಟವನ್ನು ಆಲಿಸಿ ಸ್ಥಳದಲ್ಲೇ ಪರಿಹಾರ ಒದಗಿಸುವ ಅತ್ಯಂತ ಜನಪ್ರಿಯ ಕಾರ್ಯಕ್ರಮವೊಂದನ್ನು ನಡೆಸಿ ನಿರೂಪಿಸಿದ್ದರು.

ಈಗ ಕುಮಾರಸ್ವಾಮಿ ಅವರು ಮತ್ತೆ ಮುಖ್ಯಮಂತ್ರಿಯಾಗಿರುವ ಕಾರಣ ಆ ಸುವರ್ಣ ಯುಗ ಮರುಕಳಿಸುತ್ತಿದೆ. ಈಗಾಗಲೇ ಒಂದಷ್ಟು ಹಳ್ಳಿಗಳಲ್ಲಿ ಗ್ರಾಮ ವಾಸ್ತವ್ಯ ನಡೆಸಿರುವ ಅವರು,  ನಾಳೆಯಿಂದ ಮೂರು ದಿನಗಳ ಕಾಲ ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ತಮ್ಮ ಮೊದಲ ಗ್ರಾಮ ವಾಸ್ತವ್ಯವನ್ನು ಯಾದಗಿರಿ ಜಿಲ್ಲೆಯ ಗುರುಮಿಟ್ಕಲ್ ತಾಲ್ಲೂಕಿನ ಚಂಡರಕಿ ಗ್ರಾಮದಲ್ಲಿ ಪ್ರಾರಂಭಿಸಲಿದ್ದಾರೆ.

ಗ್ರಾಮವಾಸ್ತವ್ಯದ ಹಿನ್ನೆಲೆಯಲ್ಲಿ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ಇಂದು ಸಂಜೆ ರೈಲಿನ ಮೂಲಕ ಯಾದಗಿರಿಗೆ ಪ್ರಯಾಣಿಸಲಿದ್ದಾರೆ. ನಾಳೆ ಬೆಳಗ್ಗೆ ಯಾದಗಿರಿಯಿಂದ ಚಂಡರಕಿ ಗ್ರಾಮಕ್ಕೆ ಭೇಟಿ ನೀಡುವರು. ಗ್ರಾಮವಾಸ್ತವ್ಯಕ್ಕೂ ಮುನ್ನ ಈ ಗ್ರಾಮದಲ್ಲಿ ಮುಖ್ಯಮಂತ್ರಿಗಳು ಬೆಳಗ್ಗೆ 10ರಿಂದ ಸಂಜೆ 6ರವರೆಗೂ ಜನತಾದರ್ಶನ ನಡೆಸಿ ಸಾರ್ವಜನಿಕರಿಂದ ಮನವಿ ಸ್ವೀಕರಿಸುವುದಲ್ಲದೆ ಕುಂದುಕೊರತೆಗಳನ್ನು ಆಲಿಸಲಿದ್ದಾರೆ.

ಸಂಜೆ ರೈತರಿಗೆ ಮಾದರಿ ಕೃಷಿ, ಬೆಳೆ ಪರಿವರ್ತನೆ ಸೇರಿದಂತೆ ಹಲವು ಮಾಹಿತಿಗಳನ್ನು ನೀಡಲಾಗುತ್ತದೆ. ಸ್ಥಳೀಯ ಶಾಲಾ ಮಕ್ಕಳು ನಡೆಸಿಕೊಡುವ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಕುಮಾರಸ್ವಾಮಿ, ಶಾಲಾ ಮಕ್ಕಳು ಮತ್ತು ಶಿಕ್ಷಕರೊಂದಿಗೆ ರಾತ್ರಿ ಭೋಜನ ಮಾಡಲಿದ್ದಾರೆ.  ಚಂಡರಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಮೊದಲ ಗ್ರಾಮವಾಸ್ತವ್ಯವನ್ನು ಮುಖ್ಯಮಂತ್ರಿ ಮಾಡಲಿದ್ದಾರೆ.

ಜೂ.22ರಂದು ಬೆಳಗ್ಗೆ ಚಂಡರಕಿ ಗ್ರಾಮದಿಂದ ಕಲಬುರಗಿ ಜಿಲ್ಲೆಯ ಅಫ್ಜಲ್‍ಪುರ ತಾಲ್ಲೂಕಿನ ಹೆರೂರ್(ಬಿ) ಗ್ರಾಮಕ್ಕೆ ಭೇಟಿ ಕೊಡಲಿದ್ದಾರೆ. ಈ ಗ್ರಾಮದಲ್ಲಿ ತಮ್ಮ 2ನೇ ಗ್ರಾಮ ವಾಸ್ತವ್ಯವನ್ನು ಮಾಡಲಿರುವ ಮುಖ್ಯಮಂತ್ರಿಗಳು ಇಲ್ಲೂ ಕೂಡ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಜನತಾದರ್ಶನ ನಡೆಸಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಲಿದ್ದಾರೆ.

ಸಂಜೆ ರೈತರಿಗೆ ಮಾಹಿತಿ ನೀಡುವ ಹಾಗೂ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಶಾಲಾ ಮಕ್ಕಳು ಹಾಗೂ ಶಿಕ್ಷಕರೊಂದಿಗೆ ರಾತ್ರಿ ಭೋಜನ ಮಾಡುವ ಕಾರ್ಯಕ್ರಮವಿದೆ.  ಈ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಸ್ತವ್ಯ ಹೂಡಲಿದ್ದು, ಜೂ.23ರಂದು ಬೆಳಗ್ಗೆ ಕಲಬುರಗಿಗೆ ಆಗಮಿಸಲಿದ್ದಾರೆ.

Leave a Reply