ಕಣ್ಣೀರಿಟ್ಟು ಶಾಲೆಯ ಸಮಸ್ಯೆ ಹೇಳಿಕೊಂಡ ಬಾಲಕಿ!ತಕ್ಷಣವೇ ಸೂಕ್ತ ಪರಿಹಾರ ಒದಗಿಸುವಂತ ಆದೇಶಿಸಿದ ಸಿಎಂ ಕುಮಾರಸ್ವಾಮಿ…!

ತಮ್ಮ ಹೃದಯ ಸಿರಿವಂತಿಕೆಗೆ ಹೆಸರುವಾಸಿಯಾಗಿರುವ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಮಕ್ಕಳೆಂದರೆ ಬಹಳ ಪ್ರೀತಿ ಎಂಬುದು ಎಲ್ಲರಿಗು ಗೊತ್ತೇ ಇದೆ. ಮಕ್ಕಳು ಕಂಡೊಡನೆ ಅವರ ಜೊತೆ ಕೂತು ಮಾತನಾಡಿ, ಅಪ್ಪಿಕೊಂಡು ಮುತ್ತಿಡುತ್ತಾರೆ. ಸಣ್ಣ ವಯಸ್ಸಿನಲ್ಲೇ ಮಾರಣಾಂತಿಕ ಅರೋಗ್ಯ ಸಮಸ್ಯೆಯನ್ನು ಅನುಭವಿಸುತ್ತಿರುವ ನೂರಾರು ಮಕ್ಕಳಿಗೆ ತಾವು ಅಧಿಕಾರದಲ್ಲಿ ಇಲ್ಲದಿದ್ದಾಗಲೂ ತಮ್ಮ ಸ್ವಂತ ಹಣದಿಂದ ಸಹಾಯ ಮಾಡಿರುವ, ಟಿಆರ್ಪಿ/ಹಣದ ದಾಹವಿರುವ ಸುದ್ದಿ ವಾಹಿನಿಗಳು ಎಂದಿಗೂ ಪ್ರಸಾರ ಮಾಡದೇ ಇರುವ ಹಲವಾರು ಉದಾಹರಣೆಗಳಿವೆ.

ಇದೇ ರೀತಿ ಮಾನ್ವಿಯ ಕರೇಗುಡ್ಡ ಗ್ರಾಮಕ್ಕೆ ಬಸ್‍ನಲ್ಲಿ ಸಿಎಂ ಗ್ರಾಮ ವಾಸ್ತವ್ಯಕ್ಕೆ ತೆರಳುತ್ತಿದ್ದಾಗ ಮಾರ್ಗಮಧ್ಯದಲ್ಲಿ ವಿದ್ಯಾರ್ಥಿನಿಯೊಬ್ಬಳು ಕಣ್ಣಿರಿಟ್ಟು ಶಾಲಾ ಸಮಸ್ಯೆಗಳನ್ನ ಹೇಳಿಕೊಂಡಿದ್ದಳು. ಮಾನ್ವಿ ತಾಲೂಕಿನ ನೀರಮಾನ್ವಿ ಗ್ರಾಮದ ಆದರ್ಶ ವಿದ್ಯಾಲಯದಲ್ಲಿ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. 6 ರಿಂದ 10ನೇ ತರಗತಿವರೆಗೆ ಇರುವ ಸರ್ಕಾರದ ವಿಶೇಷ ಸವಲತ್ತುಗಳ ಶಾಲೆಯಾಗಿದ್ದರೂ, ವಿದ್ಯಾರ್ಥಿಗಳಿಗೆ ಸರಿಯಾದ ಸವಲತ್ತುಗಳು ಸಿಗುತ್ತಿಲ್ಲ. ಈ ಶಾಲೆಯಲ್ಲಿ 18 ಶಿಕ್ಷಕರ ಬದಲಾಗಿ ಕೇವಲ 7 ಮಂದಿ ಶಿಕ್ಷಕರು ಮಾತ್ರ ಇದ್ದಾರೆ. ಅದರಲ್ಲೂ ಗಣಿತ, ಇಂಗ್ಲಿಷ್ ವಿಷಯಕ್ಕೆ ಶಿಕ್ಷಕರು ಇಲ್ಲದಿರುವುದು ಶಾಲೆಯ ಶೈಕ್ಷಣಿಕ ಗುಣಮಟ್ಟ ಕುಸಿಯಲು ಕಾರಣವಾಗಿದೆ.

ಶಿಕ್ಷಕರ ಕೊರೆತೆಯಿಂದ ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತಿದೆ. ಶಾಲಾ ಶಿಕ್ಷಕರು ಅನೇಕ ಬಾರಿ ಶಿಕ್ಷಕರ ಕೊರತೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಅಲ್ಲದೆ ಮಾನ್ವಿ ತಾಲೂಕಿನ ವಿವಿಧ ಗ್ರಾಮಗಳ ವಿದ್ಯಾರ್ಥಿಗಳು ಇಲ್ಲಿ ಓದುತ್ತಿರುವುದರಿಂದ ವಸತಿ ನಿಲಯದ ಅವಶ್ಯಕತೆಯೂ ಇದೆ ಎಂದು ಬಾಲಕಿ ಹೇಳಿದಳು.ಬಾಲಕಿಯ ಆಕ್ರಂದನಕ್ಕೆ ಸಿಎಂ ಕುಮಾರಸ್ವಾಮಿ ಅವರ ಮನ ಮಿಡಿಯಿತು. ಆಗ ಅವರು ಅಧಿಕಾರಿಗಳನ್ನು ಕರೆದು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದರು.

Leave a Reply