ಬಿಜೆಪಿಗೆ ಹೆಚ್‍ಡಿಕೆ ‘ವಿದಾಯ ಭಾಷಣ’ವೆಂಬ ಸತ್ಯದ ಚಾವುಟಿ ಏಟು…!

ಸುಮಾರು ಮೂರು ವಾರಗಳ ಹಿಂದೆ ಗ್ರಾಮ ವಾಸ್ತವ್ಯವೆಂಬ ಸುಕಾರ್ಯವನ್ನು ಮುಗಿಸಿ, ಅಮೇರಿಕಾದಲ್ಲಿ ಕಾಲ ಭೈರವೇಶ್ವರ ದೇಗುಲದ ಶಂಕುಸ್ಥಾಪನೆಗೆ ಹಾಗೂ ಕರ್ನಾಟಕದ ಅಭಿವೃದ್ಧಿಗೆ ವಿದೇಶಿ ಕಂಪನಿಗಳು ಹಣ ಹೂಡಿಕೆ ಮಾಡುವ ಬಗ್ಗೆ ಚರ್ಚೆ ಮಾಡಲು ರಾಜ್ಯದ ಅಭಿವೃದ್ಧಿಯನ್ನು ಶರವೇಗದಲ್ಲಿ ಕೊಂಡೊಯುತ್ತಿದ್ದ ಹಂಗಾಮಿ ಮಾನ್ಯ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ತೆರಳಿದ್ದರು. ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಇಲ್ಲದಿರುವ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡು, ಬಿ.ಎಸ್ ಯಡಿಯೂರಪ್ಪ ನಾಯಕತ್ವದ ಬಿಜೆಪಿ ಪಕ್ಷವು ತನ್ನ ಆಪರೇಷನ್ ಕಮಲಾ ಕುತಂತ್ರವನ್ನು ನಡೆಸಿ ಸರ್ಕಾರವನ್ನು ಕೆಡವೇ ಬಿಟ್ಟರು!

ನಮ್ಮ ಅಭಿವೃದ್ಧಿಗೆ ಶ್ರಮಿಸಲು ನಮ್ಮ ತೆರಿಗೆ ಹಣದಲ್ಲಿ ನಡೆಸಿದ ಚುನಾವಣೆಯಲ್ಲಿ ನಾವು ನಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ ಗೆಲ್ಲಿಸಿದ ನಮ್ಮ ಪ್ರತಿನಿಧಿಗಳು ತಮ್ಮ ಜವಾಬ್ದಾರಿಯನ್ನು ಮರೆತು ಲಜ್ಜೆಗೆಟ್ಟು, ಜನರ ತೀರ್ಪನ್ನು ದಿಕ್ಕರಿಸಿ, ಹಣ ಹಾಗು ಮಂತ್ರಿಗಿರಿಯ ಆಮಿಷಕ್ಕೆ ಬಲಿಯಾಗಿ ಪ್ರಜಾ ಪ್ರಭುತ್ವವನ್ನು ಈ ಪವಿತ್ರವಾದ ನಾಡಿನಲ್ಲಿ ಕಗ್ಗೊಲೆ ಮಾಡಿದ್ದಾರೆ! ಇದನ್ನು ಸಮರ್ಥಿಸಿಕೊಳ್ಳುವವರು ಮಾನಸಿಕ ಅಸ್ವಸ್ತರೇ ಆಗಿರಬೇಕು.

ಹೆಚ್.ಡಿ ಕುಮಾರಸ್ವಾಮಿ ಅವರು ರಾಜೀನಾಮೆ ನೀಡುವ ಮುನ್ನ ಸದನದಲ್ಲಿ ತಮ್ಮ ವಿದಾಯ ಭಾಷಣದ ಮೂಲಕ ಬಿಜೆಪಿ ಪಕ್ಷದವರಿಗೆ ಸತ್ಯದ ಚಾವುಟಿ ಏಟು ನೀಡಿದರು. ತಮ್ಮ ಭಾಷಣದ ಆರಂಭದಲ್ಲೇ ಕಳೆದ ಎರಡು ವಾರಗಳಲ್ಲಿ ನಡೆದ ಕೀಳು ಮಟ್ಟದ ರಾಜಕಾರಣಕ್ಕೆ ನಾಡಿನ ಆರೂವರೆ ಕೋಟಿ ಜನರಿಗೆ ಕ್ಷಮೆ ಕೋರಿ ಮಾನವೀಯತೆ ಮೆರೆದರು. ಕಳೆದ ಬಾರಿ ತಾವು ಮುಖ್ಯಮಂತ್ರಿಯಾಗಿದ್ದಾಗ ಏನೇನು ನಡೆಯಿತು ಎಂದು ಬಿಜೆಪಿ ಅವರಿಗೆ ನೆನಪಿಸಿಕೊಟ್ಟರು.

ಬಿಜೆಪಿ ಸರ್ಕಾರವು ಆಡಳಿತಕ್ಕೆ ಬಂದಿದೆ ಎಂದು ಸಂಭ್ರಮಿಸುತ್ತಿರುವವರು ಒಮ್ಮೆ ಅದು ಹೇಗೆ ಅಧಿಕಾರಕ್ಕೆ ಬಂದಿದೆ ಎಂಬುದನ್ನು ವಿವೇಚನೆ ಮಾಡಿ. ನಾವು ಬೆವರು ಸುರಿಸಿ, ನಮ್ಮ ಬದುಕನ್ನು ಕಟ್ಟಿಕೊಳ್ಳಲು ಶ್ರಮಿಸಿ ಸಂಪಾದಿಸುವ ಹಣದ ಒಂದು ಭಾಗವನ್ನು ರಾಜ್ಯದ ಹಾಗು ದೇಶದ ಅಭಿವೃದ್ಧಿಗೆ ಸಮರ್ಪಿಸಿದ್ದನ್ನು ಲೂಟಿ ಮಾಡಿ ತಮ್ಮ ಅಧಿಕಾರ ದಾಹವನ್ನು ನೀಗಿಸಿಕೊಳ್ಳಲು ದುರ್ಬಳಕೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಒಮ್ಮೆ ಆಲೋಚಿಸಿ!

Leave a Reply