ಹೆಚ್.ಡಿ.ಕೆ ನವೀಕರಿಸಿದ್ದ ಕರಾವಳಿ ಯೋಜನೆಗೆ ರಾಜ್ಯ ಸರ್ಕಾರ ಕೊಕ್

ಹೆಚ್.ಡಿ ಕುಮಾರಸ್ವಾಮಿ ಮುಂದಾಳತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಕರಾವಳಿ ಯೋಜನೆಗೆ ಸಿಎಂ ಬಿ.ಎಸ್ ಯೆಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರವು ಕತ್ತರಿ ಹಾಕಿದೆ.

ಕರಾವಳಿ ಪ್ಯಾಕೇಜ್ ನ ಪ್ರಕಾರ ಯಂತ್ರ ಹಾಗು ಕಾರ್ಮಿಕರನ್ನು ಬಳಸಿ ಬತ್ತ ಬೆಳೆಯುವ ರೈತರ ಖಾತೆಗೆ ಪ್ರತಿ ಹೆಕ್ಟೇರ್‌ಗೆ 7,500 ರೂ. ನೇರ ಜಮಾ ಮಾಡುವುದಾಗಿ 2019 ರಲ್ಲಿ ಧನಕೀರ್ತಿ ಬಲಿಪರಂತಹ ಕರಾವಳಿ ಭಾಗದ ಪ್ರಮುಖ ರೈತ ಮುಖಂಡರ ಸಮ್ಮುಖದಲ್ಲಿ ಸಭೆ ನಡೆಸಿ ಘೋಷಿಸಲಾಗಿತ್ತು.

ಕರಾವಳಿಯ ಪ್ರಮುಖ ಬೆಳೆಯಾದ ಬತ್ತದ ಕಡೆಗೆ ಕೃಷಿಕರ ಒಲವು ಕಡಿಮೆಯಾಗುತ್ತಿದ್ದುಇದರಿಂದ ಭತ್ತದ ಪ್ರದೇಶ ವಿಸ್ತೀರ್ಣ ಕಡಿಮೆಯಾಗುತ್ತಿತ್ತು. ಕರಾವಳಿ ಭಾಗದ ಜನಪ್ರಿಯ ಕೆಂಪಕ್ಕಿ ಸಹಿತ ಇತರ ಅಪರೂಪದ ಅಕ್ಕಿ ಮಾರುಕಟ್ಟೆಯಲ್ಲಿ ಕಡಿಮೆಯಾಗಿ ಅದರ ಬೆಲೆ ಗಗನಕ್ಕೇರಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕರಾವಳಿ ರೈತರನ್ನು ಗುರಿಯಾಗಿರಿಸಿಕೊಂಡು ಈ ಪ್ಯಾಕೇಜ್ ಘೋಷಣೆ ಮಾಡಲಾಗಿತ್ತು.

ಸಿದ್ದರಾಮಯ್ಯ ಸರಕಾರದಲ್ಲಿ ಕರಾವಳಿ ಪ್ಯಾಕೇಜ್‌ ಆರಂಭಿಸಿದ್ದರೂ, ಫಲಾನುಭವಿಗಳಿಗೆ ದೊರಕುತ್ತಿದ್ದ ಮೊತ್ತ ಕ್ಷುಲಕವಾಗಿತ್ತು. ಅದನ್ನು ಕುಮಾರಸ್ವಾಮಿರವರು ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುವಾಗ ರೈತರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 7,500 ರೂ.ಗೆ ಹೆಚ್ಚಿಸಿದ್ದರು. ಈ ಪ್ರದೇಶದ 2,500 ಮಿ.ಮೀ.ಗಿಂತ ಹೆಚ್ಚು ಮಳೆ ಬೀಳುವ ತಾಲೂಕುಗಳಿಗೆ ಆದ್ಯತೆ ನೀಡಲಾಗಿತ್ತು. ರೈತರು ಗರಿಷ್ಠ ಎರಡು ಎಕರೆವರೆಗೆ ಪ್ರಯೋಜನ ಪಡೆಯಲು ಅರ್ಹತೆ ಪಡೆದಿದ್ದರು. ಕನಿಷ್ಠ ಒಂದು ಎಕರೆ ವಿಸ್ತಿರ್ಣವುಳ್ಳ ರೈತರಿಗೂ ಯೋಜನೆಯ ಲಾಭ ಸಿಕ್ಕಿತ್ತು. ಒಟ್ಟು 20 ಸಾವಿರ ರೈತರಿಗೆ ಪ್ರೋತ್ಸಾಹಧನ ನೀಡುವ ಯೋಜನೆ ಇದಾಗಿತ್ತು.

ಸಮ್ಮಿಶ್ರ ಸರ್ಕಾರದ ಹಲವು ಜನಪರ ಯೋಜನೆಗಳಿಗೆ ತಡೆಯಾಜ್ಞೆ ಹೊರಡಿಸಿದಂತೆ ಈ ರೈತಪರ ಯೋಜನೆಗೂ ಬಿಜೆಪಿ ಸರ್ಕಾರ ಮೂಗು ತೂರಿಸಿದೆ.

Leave a Reply