ಕಳಪೆ ವಿಮರ್ಶಾತ್ಮಕ ಚಿಂತನೆಗೆ ಉದಾಹರಣೆ ರಾಜ್ಯ ಸರ್ಕಾರದ ಈ ನಡೆಗಳು

ಕಳೆದ ವಾರ ಬಾಗಲಕೋಟೆಯಲ್ಲಿ ಕ್ಷೌರಿಕನೊಬ್ಬ ದಲಿತನಿಗೆ ಕ್ಷೌರ ಮಾಡಲು ನಿರಾಕರಿಸಿದ. ನಂತರ ಮೈಸೂರಿನಲ್ಲಿ ದಲಿತನಿಗೆ ಕ್ಷೌರ ಮಾಡಿದಕ್ಕೆ ಕ್ಷೌರಿಕನೊಬ್ಬ ಊರಿನಿಂದ ಬಹಿಷ್ಕಾರಗೊಂಡ. ಈ ಎರಡೂ ಘಟನೆಗಳು ದೇಶದ ಬೆನ್ನಿನಿಂದ ಇಳಿಸಲಾಗದ ಜಾತೀಯತೆ ಎಂಬ ಬೇತಾಳದೊಂದಿಗೆ ನಮನ್ನು ದೃಷ್ಟಿಯುದ್ದವಾಡಲು ಒತ್ತಾಯಿಸಿದೆ. ಇದಕ್ಕೆ ನಮ್ಮ ರಾಜ್ಯ ಸರ್ಕಾರದ ಪರಿಹಾರವು ಸರ್ಕಾರೀ ಕ್ಷೌರ ಕೇಂದ್ರಗಳನ್ನು ಸ್ಥಾಪಿಸುವುದು. ಹಾಗಾದರೆ ಜಾತೀಯತೆಗೆ ಪರಿಹಾರ ಮತ್ತಷ್ಟು ಪ್ರತ್ಯೇಕತೆಯೋ?

ಕಳೆದ ವಾರವಷ್ಟೇ ವೀರಶೈವ ಅಭಿವೃದ್ಧಿ ನಿಗಮ, ಮರಾಠ ಅಭಿವೃದ್ಧಿ ಪ್ರಾಧಿಕಾರಗಳನ್ನು ಸ್ಥಾಪಿಸಿ ರಾಜ್ಯದೆಲ್ಲೆಡೆ ಜನರ ಆಕ್ರೋಶಕ್ಕೆ ಗುರಿಯಾದ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು ಮತಕ್ಕಾಗಿ ಈ ಕುತಂತ್ರಗಳನ್ನು ಮಾಡುತ್ತಿದೆಯಷ್ಟೆ ಎಂದು ಸಮರ್ಥಿಸ್ಕೊಳ್ಳಬಹುದೇನೋ. ಆದರೆ ಈ ನಿರ್ಧಾರವು ಬಿಜೆಪಿ ನಾಯಕರಲ್ಲಿ ಕೊರತೆಯಿರುವ ವಿಮರ್ಶಾತ್ಮಕ ಚಿಂತನೆಯನ್ನು ಬಾಲ ನೆರೆ ಅನುಭವಿಸುತ್ತಿರುವ ಹದಿಹರಿಯದ ಯುವಕನ ತಲೆಯ ಮೇಲಿನ ಬಿಳಿ ಕೂದಲಿನಂತೆ ಎದ್ದು ಕಾಣುವಂತೆ ಮಾಡಿದೆ.

ಜನರ ಮನಸಿನಲ್ಲಿ ಶುಲ್ಕರಹಿತವಾಗಿ ಠಿಕಾಣಿ ಹಾಕಿರುವ ಜಾತೀಯತಯನ್ನು ಒದ್ದು ಓಡಿಸಲು ಸಾಧ್ಯವಿರುವುದು ಒಂದು ಆರೋಗ್ಯಕರ ಸಮಾಜದ ಅವಿಭಾಜ್ಯ ಅಂಗವಾಗಿರುವ ಜಾತ್ಯತೀತ ಮನೋಭಾವವೇ ಹೊರೆತು ಪ್ರತ್ಯೇಕತೆಯಲ್ಲ. ಇಂತಹ ಗಾಂಪ ತಾತ್ಕಾಲಿಕ ಪರಿಹಾರಗಳು ರಾಜ್ಯ ಬಿಜೆಪಿ ನಾಯಕರ ದಾರ್ಶನಿಕತೆಯ ಕೊರತೆಯನ್ನು ತೋರುತ್ತದೆ.

Leave a Reply