ಬಿಜೆಪಿ ಪಕ್ಷದಲ್ಲಿ ಮುಗಿಯದ ಆಂತರಿಕ ಕಚ್ಚಾಟ ಇನ್ನೂ ಟೇಕ್ ಆಫ್ ಆಗದ ರಾಜ್ಯ ಸರ್ಕಾರ

ಬಹಳಷ್ಟು ಹುಮ್ಮಸ್ಸಿನೊಂದಿಗೆ ಬಿ.ಎಸ್ ಯೆಡಿಯೂರಪ್ಪ 26 ಜುಲೈ, 2019 ರಂದು ಕರ್ನಾಟಕ ರಾಜ್ಯದ 31 ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದಕ್ಕೂ ಮುನ್ನ ಕೇವಲ 6 ದಿನಗಳ ಮಟ್ಟಿಗೆ ಮುಖ್ಯಮಂತ್ರಿಯಾಗಿ ನಂತರ ವಿಶ್ವಾಸಮತ ಗಳಿಸಲಾಗದೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿತ್ತು ಯೆಡಿಯೂರಪ್ಪನವರ ಪರಿಸ್ಥಿತೆ. ಬಹುಷಃ ಇದೇ ಕಾರಣದಿಂದಾಗಿ ಅವರು ಹಠ ಹಿಡಿದು ಮುಖ್ಯಮಂತ್ರಿ ಆಗಿಯೇ ತೀರಬೇಕೆಂದು ದುರ್ಮಾರ್ಗ ಹಿಡಿದರು. ಹಾಗಾದರೆ ಇಷ್ಟೊಂದು ರೋಷಾವಿಷ್ಟದಿಂದ ಚಲನೆಯಲ್ಲಿದ್ದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಕೆಡವಿ ಮುಖ್ಯಮಂತ್ರಿ ಸ್ಥಾನ ಪಡೆದ ಬಿ.ಎಸ್ ಯೆಡಿಯೂರಪ್ಪನವರ ಒಂದು ವರ್ಷಕ್ಕೂ ಹೆಚ್ಚಿನ ಅವಧಿಯಲ್ಲಿ ಮಾಡಿದ ಸಾಧನೆಯಾದರು ಏನು? ಶೂನ್ಯ.

ಇಂದಿಗೆ ಬಿಜೆಪಿ ಪಕ್ಷವು ರಾಜ್ಯದಲ್ಲಿ ಅಧಿಕಾರದ ಲಗಾಮು ಹಿಡಿದು ಸುಮಾರು 462 ದಿನಗಳು ಕಳೆದಿವೆ. ಆದರೆ ಇನ್ನೂ ಬಹಳಷ್ಟು ಖಾತೆಗಳು ಮುಖ್ಯಮಂತ್ರಿಯವರ ನಿಯಂತ್ರಣದಲ್ಲಿಯೇ ಉಳಿದುಕೊಂಡಿದೆ. ತಮ್ಮ ಸಂಪುಟ ವಿಸ್ತರಣೆಯ ಬೆಳವಣಿಗಗಳ ಬಗ್ಗೆ ವಿಚಾರಿಸದಾಗಲೂ ಹೈ ಕಮಾಂಡ್ ನತ್ತ ಬೆರಳು ಮಾಡುವ ಪರಿಸ್ಥಿತಿಯಲ್ಲಿರುವ ಮುಖ್ಯಮಂತ್ರಿಯು ಕೇವಲ ದೆಹಲಿ ನಾಯಕರ ಸೂತ್ರದ ಗೊಂಬೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಅಲ್ಲದೆ ಇವರು ಅಧಿಕಾರಕ್ಕೆ ಬಂದಾಗಲಿನಿಂದಲೂ ಒಂದಾದ ಮೇಲೆ ಒಂದರಂತೆ ಸಾಲು ಸಾಲು ಚುನಾವಣೆಗಳು ನಡೆಯುತ್ತಾ ಬಂದಿದ್ದು, ಅಧಿಕಾರದ ಆಮಿಷದೊಂದಿಗೆ ತುಂಬಿ ತುಳುಕುತ್ತಿರುವ ಬಿಜೆಪಿ ಪಕ್ಷವು ತನ್ನ ಎಲ್ಲಾ ಶ್ರಮ ಹಾಗು ಸವಲತ್ತುಗಳನ್ನು ಚುನಾವಣೆಗಳನ್ನು ಗೆಲ್ಲುವುದಕ್ಕೆ ಬಳಸುತ್ತಿದ್ದೆಯೇ ಹೊರೆತು ಯಾವ ಅಭಿವೃದ್ಧಿ ಕಾರ್ಯಗಳಿಗೂ ಅಲ್ಲ.

ಒಂದು ಕಡೆ ಸಿಎಂ ಕುರ್ಚಿಯಿಂದ ಯಡಿಯೂರಪ್ಪನವರನ್ನು ಕೆಳಗೆ ಇಳಿಸಲು ಬಿಜೆಪಿ ಪಕ್ಷದಲ್ಲೇ ಸಾಕಷ್ಟು ನಾಯಕರು ಪಣ ತೊಟ್ಟು ಬಹಿರಂಗವಾಗಿ ಕಾರ್ಯಾಚರಣೆ ನೆಡೆಸುತ್ತಿದ್ದಾರೆ. ಇನ್ನೊಂದೆಡೆ ಮಾತೃ ಪಕ್ಷಗಳ ಬೆನ್ನಿಗೆ ಚೂರಿ ಹಾಕಿ ಬಂದ ಹದಿನೇಳು ಜನ ಶಾಸಕರು ಮಂತ್ರಿಗಿರಿಗಾಗಿ ಯೆಡಿಯೂರಪ್ಪನವರನ್ನು ಪೀಡಿಸುತ್ತಾ ಮಾಧ್ಯಮಗಳ ಮುಂದೆ ತಮ್ಮ ಅಳಲು ತೋಡಿಕೊಳ್ಳುತ್ತಿರುವುದು ನಿಜಕ್ಕೂ ಬಂಡರು ಸಹ ಮುಜುಗರ ಪಡುವಂತಹ ಸಂಗತಿ.


2008 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಯಡ್ಡಿಯೂರಪ್ಪ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದಲ್ಲದೆ, ಪಕ್ಷದಲ್ಲಿ ಬಣ ರಾಜಕೀಯ ತಾರಕಕ್ಕೇರಿ ಮೂರು ಮೂರು ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡಿ ನಗೆಪಾಟಲಾಗಿದ್ದ ಬಿಜೆಪಿ ಸರ್ಕಾರ ಮತ್ತೆ ಕಾರ್ಯಕರ್ತರ ಹಾಗೂ ಪ್ರಜೆಗಳ ನಿರೀಕ್ಷೆಗೆ ಕಲ್ಲು ಹಾಕುವಂತ್ತಿದೆ. ಆದ್ದರಿಂದ ಕನಿಷ್ಠ ಪಕ್ಷ ಸೂಕ್ತ ನೆರೆ ಪರಿಹಾರ ದೊರಕಿಸಿಕೊಡಲಾಗದ ಇದೊಂದು ಕೈಲಾಗದ ಡಮ್ಮಿ ಸರ್ಕಾರ ಎಂದು ಇತಿಹಾಸ ಪುಟಗಳಲ್ಲಿ ದಾಖಲಾಗುವುದು ಬಹುತೇಕ ಖಚಿತ.

Leave a Reply