ಒಮ್ಮೆ ಮೋಸ ಹೋಗಿದ್ದ ಐಎಂಎ ಹಗರಣದ ಸಂತ್ರಸ್ತರಿಗೆ ಮತ್ತೆ ದ್ರೋಹ ಬಗೆದ ಯಡಿಯೂರಪ್ಪ ಸರ್ಕಾರ!

ಕಳೆದ ವರ್ಷ ಜೂನ್ ಮಾಹೆಯಲ್ಲಿ ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ರಸ್ತೆಯಲ್ಲಿರುವ ‘ಐ ಮೊನೆಟೊರಿ ಅಡ್ವೈಸರಿ’ (ಐಎಂಎ) ಸಂಸ್ಥೆ ಮುಂದೆ ಬೆಳ್ಳಂ ಬೆಳಗ್ಗೆ ಸಾವಿರಾರು ಜನರು ಕ್ರೋಧದಿಂದ ತಮ್ಮ ಅಳಲು ತೋಡಿಕೊಳ್ಳುವ ದೃಶ್ಯ ಪ್ರತಿಯೊಂದು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿತ್ತು. ಈ ಇಸ್ಲಾಂ ಬ್ಯಾಂಕಿಂಗ್ ಸಂಸ್ಥೆಯ ಮುಖ್ಯಸ್ಥ ಮೊಹಮದ್ ಮನ್ಸೂರ್ ಖಾನ್ ಹಲಾಲ್ ಹೂಡಿಕೆಯ ಹೆಸರಿನಲ್ಲಿ ಸುಮಾರು 50,000 ಕ್ಕೂ ಹೆಚ್ಚು ಮಧ್ಯಮ ವರ್ಗ ಮುಸಲ್ಮಾನರ ಹಣ ನುಂಗಿ ನೀರು ಕುಡಿದ ಪ್ರಕರಣ ದೇಶವ್ಯಾಪ್ತಿ ಸುದ್ದಿ ಮಾಡಿತ್ತು.

ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಪ್ರಕರಣವನ್ನು ಕರ್ನಾಟಕ ಲೋಕಾಯುಕ್ತ ಸ್ಪೆಷಲ್ ಇನ್ವೆಸ್ಟಿಗೇಷನ್ ಟೀಮ್ ಗೆ ಒಪ್ಪಿಸಿದ ಕ್ಷಣಗಣನೆ ಆರೋಪಿಗಳ ಬಂಧನವಾಗಿತ್ತು. ಕಾಂಗ್ರೆಸ್ ಶಾಸಕ ರೋಷನ್ ಬೇಗ್ ಹಾಗು ಜಮೀರ್ ಅಹ್ಮದ್ ಈ ಹಗರಣದಲ್ಲಿ ಭಾಗಿಯಾಗಿರಬಹುದು ಎಂಬ ಸೂಚನೆಗಳು ಸಿಕ್ಕಾಗ ವಿರೋಧ ಪಕ್ಷದ ನಾಯಕರಾಗಿದ್ದ ಯಡಿಯೂರಪ್ಪ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಒತ್ತಾಯ ಮಾಡ ತೊಡಗಿದರು. ಸಂತ್ರಸ್ತರಿಗೆ ನ್ಯಾಯ ಒದಗಿಸಿಕೊಡಲು ಅಹೋರಾತ್ರಿ ಧರಣಿ ಕೂರುತ್ತೇನೆ ಎಂದು ಘೋಷಿಸಿದ್ದರು. ಇದು ಕರ್ನಾಟಕದ ಒಂದು ಸರ್ಕಾರಿ ಆಯೋಗದ ಮೇಲೆ ಅವರಿಗಿದ್ದ ಅವಿಶ್ವಾಸ ತೋರುತ್ತದೆಯೋ ಅಥವಾ ಒಮ್ಮೆ ಕೇಂದ್ರ ನಿಯಂತ್ರಣದಲ್ಲಿರುವ ಆಯೋಗದ ಕೈಗೆ ಪ್ರಕರಣ ಸಿಕ್ಕರೆ ಅವರಿಗೆ ಬೇಕಾದ ರೀತಿಯಲ್ಲಿ ತಿರುಚಿ ಬೇಡದಿರುವವರ ವಿರುದ್ಧ ಸುಲಭವಾಗಿ ಕ್ರಮ ಕೈಗೊಳ್ಳಬಹುದು ಎಂಬ ಮುಂದಾಲೋಚನೆಯೋ ಅವರೇ ಖಚಿತಪಡಿಸಬೇಕು.

ಈ ಹಗರಣದಿಂದ ಹಲವಾರು ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಸಾವಿರಾರು ಕುಟುಂಬಗಳು ಬೀದಿಗೆ ಬಂದಿವೆ, ನೂರಾರು ಕುಟುಂಬಗಳು ನಶಿಸಿ ಹೋಗಿವೆ. ಸದ್ಯ ರಾಜ್ಯದಲ್ಲಿ ಯಡಿಯೂರಪ್ಪ ಮುಂದಾಳತ್ವದ ಬಿಜೆಪಿ ಸರ್ಕಾರವು ಅಧಿಕಾರದಲ್ಲಿದೆ. ಆದರೆ ಅಂದು ಅಹೋರಾತ್ರಿ ಧರಣಿ ಕೂರಲು ತಯಾರಿಗಿದ್ದ ಯಡಿಯೂರಪ್ಪನವರಿಂದ ಒಂದು ವರ್ಷವಾದರೂ ಸಂತ್ರಸ್ತರಿಗೆ ಯಾವುದೇ ರೀತಿಯ ನೆರವು ಅಥವಾ ಯಾವುದೇ ರೀತಿಯ ಸಾಂತ್ವನ ದೊರಕಿಲ್ಲ. ಬೀದಿಗೆ ಬಂದವರು ಇನ್ನೂ ಬೀದಿಯಲ್ಲೇ ಉಳಿದಿದ್ದಾರೆ.

ಯಡಿಯೂರಪ್ಪ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಉದ್ದೇಶದಿಂದ ನೊಂದವರಿಗೆ ಬೆಂಬಲವಾಗಿ ನಿಲ್ಲುತ್ತೇನೆಂದು ನಂಬಿಸಿ ನಂತರ ಅವರನ್ನು ನಿರ್ಲಕ್ಷ್ಯ ಮಾಡಿ ಒಮ್ಮೆ ಮೋಸ ಹೋದವರಿಗೆ ಮತ್ತೆ ದ್ರೋಹ ಬಗೆದಿದ್ದಾರೆ.

Leave a Reply