ರಾಜ್ಯ ಕಾಂಗ್ರೆಸ್ ಈಗ ಮನೆಯೊಂದು ಮೂರು ಬಾಗಿಲು

ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (ಐ.ಎನ್.ಸಿ) ಈಗ ಮುಳುಗುತ್ತಿರುವ ಹಡಗು ಎಂಬುದು ಎಲ್ಲರಿಗೂ ಗೊತ್ತೇ ಇರುವ ವಿಷಯ. ದುರ್ಬಲ ನಾಯಕತ್ವದ ಪರಿಣವಾಗಿ ಸತತವಾಗಿ ೬-೭ ವರ್ಷಗಳಿಂದ ಸಾಲು ಸಾಲು ಚುನಾವಣೆಗಳಲ್ಲಿ ಹೀನಾಯವಾಗಿ ಸೋತು ಸುಣ್ಣವಾಗಿದೆ. ಅದರ ಪ್ರಭಾವ ಕೇವಲ ೩ ವರ್ಷಗಳ ಹಿಂದೆ ಒಂಟಿ ಸಾಲಗಾವಾಗಿ ಕರ್ನಾಟಕದಲ್ಲಿ ಅಧಿಕಾರ ಚಲಾಯಿಸುತ್ತಿದ್ದ ರಾಜ್ಯ ಕಾಂಗ್ರೆಸ್ ಪಕ್ಷದ ಮೇಲು ಬೀರಿದೆ.

ಲೋಕ ಸಭಾ ಚುನಾವಣೆ ಹಾಗು ವಿಧಾನ ಸಭಾ ಉಪಚುನಾವಣೆಗಳಲ್ಲಿ ಹೀನಾಯ ಸೋಲು ಕಂಡ ಹಿನ್ನಲೆಯಲ್ಲಿ ೨೦೨೩ ರ ವಿಧಾನ ಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಆಗಾಗ ಇ.ಡಿ ಹಾಗು ಸಿಬಿಐ ನಿಂದ ವಿಚಾರಣೆಗಾಗಿ ವಿಶೇಷ ಆಮಂತ್ರಣ ಪಡೆಯುವ ಕನಕಪುರದ ಬಂಡೆ ಡಿ.ಕೆ ಶಿವಕುಮಾರ್ ರವರಿಗೆ ಕೆಪಿಸಿಸಿಯ ಅಧ್ಯಕ್ಷತೆಯನ್ನು ಸಿದ್ದರಾಮಯ್ಯರವರಿಂದ ಹಸ್ತಾಂತರ ಮಾಡಿಸಲಾಯಿತು. ನಾಯಕತ್ವದ ಬದಲಾವಣೆಯ ನಂತರವೂ ಸಹ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಎರಡು ಉಪಚುನಾವಣೆಗಳನ್ನು ಸೋತಿದೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಕಾಡುತ್ತಿರುವ ಸಮಸ್ಯೆ ಕೇವಲ ಸರಣಿ ಸೋಲುಗಳಲ್ಲ, ಬದಲಾಗಿ ಪಕ್ಷದಲ್ಲಿ ಕ್ಷೀಣಿಸುತ್ತಿರುವ ಒಗ್ಗಟ್ಟು ಸಹ ಹೌದು.

ರಾಜ್ಯ ಕಾಂಗ್ರೆಸ್ ಪಕ್ಷವು ಪಕ್ಷದಲ್ಲಿನ ಸಮಸ್ಯೆಗಳನ್ನು ಆಲಿಸುವ ಬದಲು ೨೦೨೩ ರ ವಿಧಾನ ಸಭಾ ಚುನಾವಣೆಯಲ್ಲಿ ಒಂದು ವೇಳೆ ಬಹುಮತ ಪಡೆ್ದರೆ ಮುಖ್ಯಮಂತ್ರಿ ಯಾರಾಗಬೇಕು ಎಂಬುದರ ಬಗ್ಗೆ ಈಗಲಿಂದಲೇ ಕಚ್ಚಾಟ ಶುರು ಮಾಡಿದೆ. ಮುಂದಿನ ೨೦೨೩ ರ ವಿಧಾನ ಸಭಾ ಚುನಾವಣೆಯ ಬಳಿಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕು ಎಂಬುವವರ ಬಣವೊಂದಾದರೆ, ಮತ್ತೊಂದೆಡೆ ನೂತನ ಧುರೀಣ ಡಿಕೆಶಿ ಪರ ಬ್ಯಾಟ್ ಬೀಸುವವರ ಬಣವೊಂದು ರಚನೆಯಾಗಿತ್ತು. ಆದರೆ ಇದಕ್ಕೆ ಪರ್ಯಾಯವಾಗಿ ಕಾಂಗ್ರೆಸ್ ಪಕ್ಷದಲ್ಲಿ ಈಗ ಹೊಸದೊಂದು ಬಣ ಪುಟಿದೇಳುತ್ತಿರುವುದು ಎಲ್ಲರ ಕಿವಿ ನೆಟ್ಟಗಾಗಿಸಿದೆ!

ಹೌದು ರಾಜ್ಯ ಕಾಂಗ್ರೆಸ್ ನಲ್ಲೀಗ ಸಿದ್ದರಾಮಯ್ಯ ಹಾಗು ಡಿಕೆಶಿಯ ವರ್ಚಸ್ಸು ಹಾಗು ಅವರ ಬೆಂಬಲಿಗರ ಪ್ರಭಾವದಿಂದ ಮೂಲೆಗುಂಪಾಗಿರುವ ಕೆಲ ಹಿರಿಯ ಕಾಂಗ್ರೆಸ್ ನಾಯಕರು ಇದೀಗ ಪಕ್ಷದ ಒಳಗೆ ಹೊಸ ರಾಜೀಯ ದಾಳ ಉರುಳಿಸಲು ಸಜ್ಜಾಗಿದ್ದಾರೆ. ಮೂಲ ಕಾಂಗ್ರೆಸ್ಸಿಗರಿಂದ ಪರ್ಯಾಯವಾಗಿ ಶಕ್ತಿಕೇಂದ್ರ ರಚನೆಯಾಗಿದ್ದು ಬಿ.ಕೆ.ಹರಿಪ್ರಸಾದ್, ಜಿ.ಸಿ.ಚಂದ್ರಶೇಖರ್, ಹೆಚ್.ಕೆ.ಪಾಟೀಲ್, ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ ಹಾಗೂ ಕೆ.ಹೆಚ್ ಸಿ.ಮುನಿಯಪ್ಪ ಸೇರಿದಂತೆ ಹಿರಿಯ ನಾಯಕರ ತೃತೀಯ ರಂಗ(ಥರ್ಡ್ ಫ್ರಂಟ್) ಒಂದು ಸಜ್ಜಾಗಿದೆ.

ತಿಂಗಳಿಗೊಮ್ಮೆ ಅಗತ್ಯವಿದ್ದಾಗ ಮೂಲ ಕಾಂಗ್ರೆಸ್ಸಿಗರಿರುವ ಈ ಥರ್ಡ್ ಫ್ರಂಟ್ ಮೀಟಿಂಗ್ ನಡೆಸುತ್ತಿದ್ದು ಈಗಾಗಲೇ ಸಭೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ರಾಜಕೀಯ ಬೆಳವಣಿಗೆ ಆದಾಗಲೆಲ್ಲಾ ಸಭೆ ಸೇರಲು ನಿರ್ಧರಿಸಿರುವ ಈ ತಂಡಕ್ಕೆ ಮುಂದಿನ ವಿಧಾನಸಭಾ ಚುನಾವಣೆಯೇ ಟಾರ್ಗೆಟ್. ತಮ್ಮ ಬೆಂಬಲಿಗರಿಗೆ ಹೆಚ್ಚು ಸೀಟ್ ದಕ್ಕಿಸಿಕೊಂಡು ಈ ಮೂಲಕ ಪಕ್ಷದಲ್ಲಿ ಪ್ರಾಬಲ್ಯ ಹಾಗು ಹಿಡಿತ ಹೆಚ್ಚಿಸಿಕೊಳ್ಳುವುದು ಇವರ ತಂತ್ರವಾಗಿದೆ. ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷವು ಈಗ ಮನೆಯೊಂದು ಮೂರು ಬಾಗಿಲಿನಂತೆ ಆಗಿದೆ!

Leave a Reply