ನನ್ನ ರೈತರ ಬಗ್ಗೆ ಸಣ್ಣತನದಲ್ಲಿ ಮಾತನಾಡಬೇಡಿ – ಬಿಸಿ ಪಾಟೀಲ್ ಗೆ ಎಚ್ಚರಿಸಿದ ಹೆಚ್.ಡಿಕೆ

ಇಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಮುಂಜಾನೆ ಸುತ್ತೂರು ಮಠದ ಶ್ರೀಗಳಾದ ಶ್ರೀ ಶಿವರಾತ್ರೇಶ್ವರ ದೇಶಿಕೇಂದ್ರ ಮಹಾಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ತದನಂತರ ದೀರ್ಘಾವಧಿಯ ಬಳಿಕ ಅವರು ಕರೆ ನೀಡಿದ್ದ ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸಿ ರಾಜ್ಯದ ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸುವಾಗ ಇತ್ತೀಚಿಗೆ ಬಾರಿ ಟೀಕೆಗೆ ಪಾತ್ರವಾಗುತ್ತಿರುವ ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿಕೆ ಬಗ್ಗೆ ಮಾತನಾಡಿದರು.

ಬಿ.ಸಿ ಪಾಟೀಲ್ ಸಭೆಯೊಂದರಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂಬ ಅವಹೇಳನಕಾರಿ ಹೇಳಿಕೆ ನೀಡಿ ರಾಜ್ಯದ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಕೃಷಿ ಮಂತ್ರಿಯ ಈ ಬೇಜವಾಬ್ದಾರಿ ಹೇಳಿಕೆಗೆ ಕುಮಾರಸ್ವಾಮಿ ಅವರು “ರೈತ ಹುಟ್ಟು ಸ್ವಾಭಿಮಾನಿ ಹಾಗೂ ಮರ್ಯಾದಸ್ತ. ಸಾಲ ಕೊಟ್ಟವರು ಬಂದು ಕಿಬ್ಬದಿಯ ಕೀಲು ಮುರಿದಂತೆ ಪೀಡಿಸುವಾಗ ಮರ್ಯಾದೆಗೆ ಅಂಜಿ ದಿಕ್ಕು ತೋಚದಂತಾಗಿ ಆತ್ಮಹತ್ಯೆಗೆ ಶರಣಾಗುತ್ತಾನೆ. ಕೃಷಿ ಸಚಿವರು ಹೇಳಿದಂತೆ ರೈತ ಹೇಡಿಯಲ್ಲ. ರೈತ ರಾಜಕಾರಣಿಗಳಂತೆ ಅಧಿಕಾರಕ್ಕಾಗಿ ಬಣ್ಣ ಬದಲಿಸುವ ಗೋಸುಂಬೆ ವ್ಯಕ್ತಿತ್ವದವನಲ್ಲ. ನೆಲವನ್ನೇ ನಂಬಿ ಬದುಕುವ ಕಡು ಕಷ್ಟ ಜೀವಿ. ಇಂತಹ ರೈತ ಸಮುದಾಯಕ್ಕೆ ಕೇಂದ್ರ-ರಾಜ್ಯ ಸರ್ಕಾರಗಳು ರಟ್ಟೆಗೆ ಬಲ ತುಂಬುವ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕೇ ಹೊರತು, ಹೇಡಿ ಎಂಬ ಪಟ್ಟ ಕಟ್ಟಿ ಹೊಣೆಗೇಡಿತನ ಪ್ರದರ್ಶಿಸಬಾರದು.” ಎಂದು ಟ್ವೀಟ್ ಮೂಲಕ ತಿರುಗೇಟು ನೀಡಿದ್ದರು.

ಇಂದಿನ ಮಾಧ್ಯಮಘೋಷ್ಠಿಯಲ್ಲಿಯೂ ಸಹ ಈ ಘಟನೆಯ ಬಗ್ಗೆ ಪ್ರಸ್ತಾಪವಾದ ಕಾರಣ ಮೈತ್ರಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಕೃಷಿ ಕ್ಷೇತ್ರಕ್ಕೆ ಹಲವಾರು ಯೋಜನೆಗಳನ್ನು ರೂಪಿಸಿದ್ದೆವು. ಈಗ ಅದರಲ್ಲಿ ಯಾವುದನ್ನು ಅನುಷ್ಠಾನ ಗೊಳಿಸಿದ್ದೀರಾ? ಉದಾಹರಣೆಗೆ ಇಸ್ರೇಲ್ ಮಾದರಿ ಕೃಷಿ, ದ್ರಾಕ್ಷಿ ಬೆಳೆಗಾರರಿಗೆ ನೀಡಲು ನಾನು ಇಟ್ಟಿದ್ದ ಹಣವನ್ನು ದುರ್ಬಳಿಕೆ ಮಾಡಿಕೊಂಡಿದ್ದೀರಾ. ಹಾಗಾಗಿ ರೈತರ ಬಗ್ಗೆ ಸಣ್ಣತನದಲ್ಲಿ ಮಾತನಾಡಬೇಡಿ ಎಂದು ಹೇಳಿದ್ದಾರೆ.

Leave a Reply