ಡೆಕ್ಕನ್ ಹೆರಾಲ್ಡ್ ಸಂಪಾದಕರಿಗೆ ‘ಸೈದ್ಧಾಂತಿಕ’ ಪಾಠ ಹೇಳಿದ ಹೆಚ್.ಡಿ.ಕೆ

ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹಾಗು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯನವರ ನಡುವಿನ ಮಾತಿನ ಚಕಮಕಿ ದಿನೇ ದಿನೇ ಹೆಚ್ಚುತ್ತಿದ್ದು, ಅಲ್ಲದೇ ಜೆಡಿಎಸ್ ಪಕ್ಷವು ಕರ್ನಾಟಕ ಭೂ ಸುಧಾರಣೆ ಕಾಯ್ದೆ ಮಸೂದೆಗೆ ಬೆಂಬಲಿಸಿದ್ದರ ಬಗ್ಗೆ ಗೋಡೆಗಳೂ ಸಹ ಅಭಿಪ್ರಾಯ ವ್ಯಕ್ತಪಡಿಸುತ್ತಿರುವ ಕಾರಣ ರಾಜ್ಯ ರಾಜಕೀಯದಲ್ಲಿ ರೋಚಕತೆಗೆ ಕೊರತೆಯಿಲ್ಲದಂತ್ತಾಗಿದೆ.

ಇದರ ಹಿನ್ನಲೆಯಲ್ಲಿ ‘ಯಾವುದೇ ಸೈದ್ಧಾಂತಿಕ ಮೌಲ್ಯಗಳಿಲ್ಲದ ಪಕ್ಷ’ ಎಂಬ ಶೀರ್ಷಿಕೆಯೊಂದಿಗೆ ಜೆಡಿಎಸ್ ಪಕ್ಷವನ್ನು ತೇಜೋವಧೆ ಮಾಡುವಂತ ಲೇಖನವೊಂದು ಡೆಕ್ಕನ್ ಹೆರಾಲ್ಡ್ ನ ಸಂಪಾದಕೀಯದಲ್ಲಿ ಪ್ರಕಟವಾಗಿದ್ದು, ಹಲವು ಬಾರಿ ಮಾಧ್ಯಮಗಳಿಗೆ ತಮ್ಮ ಪಕ್ಷದ ನಿಲುವಿನ ಬಗ್ಗೆ ಸ್ಪಷ್ಟೀಕರಣ ನೀಡಿದ್ದರೂ ಸಹ, ಮತ್ತೊಮ್ಮೆ ಮಗದೊಮ್ಮೆ ಖುದ್ದು ಕುಮಾರಸ್ವಾಮಿ ಅವರೇ ಡೆಕ್ಕನ್ ಹೆರಾಲ್ಡ್ ಸಂಪಾದಕರಿಗೆ ಈ ಕುರಿತು ಪತ್ರ ಬರೆದಿದ್ದಾರೆ.

ಜೆಡಿಎಸ್ ಪಕ್ಷವು ತಾನೇ ವಿರೋಧಿಸುತ್ತಿದ್ದ ಭೂ ಸುಧಾರಣೆ ಕಾಯ್ದೆ ಮಸೂದೆಗೆ ಬೆಂಬಲಿಸಿದ, ಗೋ ಹತ್ಯೆ ನಿಷೇದ ಕಾಯ್ದೆ ವಿಷಯದಲ್ಲೂ ಬಿಜೆಪಿಗೆ ಮುಖಬಂಗವಾಗದಂತೆ ಜೆಡಿಎಸ್ ನೋಡಿಕೊಳ್ಳುತ್ತಿದೆ. ಜೆಡಿಎಸ್ ಬಿಜೆಪಿಯೊಂದಿಗೆ ಡೀಲ್ ಮಾಡಿಕೊಂಡಿದೆ. ಆದ್ದರಿಂದ ಈ ಪಕ್ಷಕ್ಕೆ ಯಾವುದೇ ಸೈದ್ಧಾಂತಿಕ ಮೌಲ್ಯಗಳು ಇಲ್ಲ ಎಂಬುದು ಡೆಕ್ಕನ್ ಹೆರಾಲ್ಡ್ ನ ಸಂಪಾದಕರ ಅಭಿಪ್ರಾಯವಾಗಿತ್ತು. ಇದಕ್ಕೆ ತಕ್ಕ ಉತ್ತರವನ್ನು ಕುಮಾರಸ್ವಾಮಿ ತಮ್ಮ ಪತ್ರದ ಮೂಲಕ ನೀಡಿದ್ದಾರೆ.

ಭೂ ಸುಧಾರಣೆ ಕಾಯ್ದೆಯಲ್ಲಿ ಜೆಡಿಎಸ್ ಪಕ್ಷದ ಸಲಹೆಗಳ ಮೇರೆಗೆ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಿ, ಹಾಗು ಅದ್ಯಾವ ತಿದ್ದುಪಡಿಗಳು ಸಹ ರೈತ ವಿರೋಧಿಯಲ್ಲ ಎಂದು ಪರಿಶೀಲಿಸಿದ ನಂತರವೇ ನಾವು ಮಸೂದೆಗೆ ಬೆಂಬಲಿಸಿದ್ದು. ಇನ್ನೂ ಗೋ ಹತ್ಯೆ ನಿಷೇದ ಕಾಯ್ದೆಯನ್ನು ನಾವು ಖಡಾ ಖಂಡಿತವಾಗಿ ವಿರೋಧಿಸುತ್ತಿದ್ದೇವೆ. ಅಷ್ಟೇ ಯಾಕೆ ಗೋ ಹತ್ಯೆ ನಿಷೇದ ಕಾಯ್ದೆ ಜಾರಿಗೆ ಬರದೇ ಇರಲು ಕಾರಣವೇ ಜೆಡಿಎಸ್ ಎಂದು ಕುಮಾರಸ್ವಾಮಿ ಅವರು ಬರೆದಿರುವ ಪತ್ರ ‘ಜೆಡಿಎಸ್ ಪಕ್ಷ ಊಸರವಳ್ಳಿಯಂತಲ್ಲ’ ಎಂಬ ಅವರ ವಾದವನ್ನು ಪುಷ್ಟೀಕರಿಸಿದೆ.

ಜೆಡಿಎಸ್ ತನ್ನ ಅಧಿಕಾರ ದಾಹ ನೀಗಿಸಿಕೊಳ್ಳಲು ಪಕ್ಷದ ಸಿದ್ದಂತಗಳನ್ನು ಅಡವಿಗೆ ಇಡುವಂತಹ ಪಕ್ಷವಲ್ಲ. ಹಲವು ದಶಕಗಳಿಂದ ಜೆಡಿಎಸ್ ಪಕ್ಷ ರಾಜ್ಯದಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಸಮರ್ಥವಾದ ಹೋರಾಟ ಮಾಡಿಕೊಂಡು ಬಂದಿದೆ, ಹಾಗು ಅದನ್ನೇ ಮುಂದುವರಿಸುತ್ತದೆ. ರಾಷ್ಟ್ರೀಯ ಪಕ್ಷಗಳಿಗೆ ಬಹುಮತ ಗಳಿಸಲು ಸಾಧ್ಯವಾಗದೆ ಇದ್ದಾಗ ಜೆಡಿಎಸ್ ಪಕ್ಷದ ಬಾಗಿಲು ತಟ್ಟುತ್ತಾರೆ. ರಾಜ್ಯದ ಜನ ಈ ಪಕ್ಷಕ್ಕೆ ರಾಜ್ಯ ರಾಜಕೀಯದಲ್ಲಿ ನಿರ್ಣಾಯಕ ಸ್ಥಾನಮಾನವನ್ನು ಕರುಣಿಸಿದ್ದಾರೆ. ಟೀಕಿಸಲು ಮುಗಿಬೀಳುವ ಮಾಧ್ಯಮಗಳು ರಾಷ್ಟ್ರೀಯ ಪಕ್ಷಗಳ ಪ್ರಾದೇಶಿಕ ಪಕ್ಷಗಳನ್ನು ಅಧಿಕಾರಕ್ಕೆ ಬರಲು ಹೀಗೆ ಉಪಯೋಗಿಸಿಕೊಳ್ಳುತ್ತಿವೆ ಎಂಬುದರ ಬಗ್ಗೆ ತುಟಿಕ್ ಪಿಟಿಕ್ ಎನ್ನುವುದಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸುವ ಮೂಲಕ ಕುಮಾರಸ್ವಾಮಿ ಡೆಕ್ಕನ್ ಹೆರಾಲ್ಡ್ ಸಂಪಾದಕರಿಗೆ ಸೈದ್ಧಾಂತಿಕ ಪಾಠ ಹೇಳಿದ್ದಾರೆ.

Leave a Reply