ಸರ್ಕಾರದ ಮೇಲೆ ಹಿಡಿತ ಕಳೆದುಕೊಂಡಿರುವ ಸಿಎಂ ಯಡಿಯೂರಪ್ಪ!

ಬಿಜೆಪಿ ಪಕ್ಷದ ಸೂಚ್ಯ ವಯಸ್ಸಿನ ನಿಯಮವನ್ನು ಮೀರಿದ್ದರೂ ಕರ್ನಾಟಕದ ಮುಖ್ಯಮಂತ್ರಿ ಆಗಿರುವ ಬಿ.ಎಸ್ ಯಡಿಯೂರಪ್ಪ (ವಯಸ್ಸು 77) ನವರ ನಿರ್ಧಾರಗಳ ಮೇಲೆ ಅವರ ಮುಪ್ಪು ಪರಿಣಾಮವನ್ನು ಬೀರುತ್ತಿರುವುದು ಎಂದಿಗಿಂತ ಸ್ಪಷ್ಟವಾಗಿ ಈಗ ರಾಜ್ಯದ ಜನತೆಗೆ ಪ್ರಜ್ವಲಿಸುತ್ತಿದೆ.

ಬ್ರಿಟನ್ ರಾಷ್ಟ್ರದಲ್ಲಿ ಪತ್ತೆಯಾದ ಕೊರೊನಾ ವೈರಾಣುವಿನ ಹೊಸ ತಳಿಯೊಂದು ಮೊದಲು ಪತ್ತೆಯಾದ ವೈರಾಣುವಿನಿಗಿಂತ ಹೆಚ್ಚಿನ ವೇಗದಲ್ಲಿ ಹರಡುತ್ತಿರುವ, ಹಾಗು ಬ್ರಿಟನ್ ದೇಶದಿಂದ ಹಲವಾರು ಮಂದಿ ರಾಜಧಾನಿಗೆ ಹಾರಿರುವ ಹಿನ್ನಲೆಯಲ್ಲಿ ಸರ್ಕಾರದ ಮುಂದಿನ ಕ್ರಮಗಳ ಬಗ್ಗೆ ಕೇಳಿದಾಗ, ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮಾಡುವ ಪ್ರಶ್ನೆಯೇ ಇಲ್ಲ ಎಂದು ಮಂಗಳವಾರ ನಿಖರವಾಗಿ ಹೇಳಿದ ಸಿಎಂ ಯಡಿಯೂರಪ್ಪ, ಲಾಕ್ ಡೌನ್ ಗೆ ಸಂಬಂಧ ಪಟ್ಟ ಬಗೆಗಿನ ನಿರ್ಣಯಗಳ ಬಗ್ಗೆ ರಾಜ್ಯದ ಜನತೆಗೆ ಮುಂಚೂಣಿಯಾಗಿ ಮಾಹಿತಿ ನೀಡಬೇಕು ಎಂಬ ನ್ಯಾಯಾಲಯದ ಎಚ್ಚರಿಕೆಯನ್ನು ಮೀರಿ, ಮರುದಿನವೇ ಬುಧವಾರದಿಂದ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಹೇರುವುದಾಗಿ ಘೋಷಿಸಿದರು.

ಇದಾದ ಬಳಿಕ ಕೆಲವೇ ಘಂಟೆಗಳಲ್ಲಿ ನೈಟ್ ಕರ್ಫ್ಯೂವನ್ನು ಬುಧವಾರದಿಂದ ಗುರುವಾರಕ್ಕೆ ಮುಂದೂಡಿ, ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಕರ್ಫ್ಯೂ ಜಾರಿಗೊಳಿಸುವುದಾಗಿ ಮೊದಲು ಘೋಷಿಸಿದ್ದ ಮುಖ್ಯಮಂತ್ರಿ ರಾತ್ರಿ 11 ರಿಂದ ಬೆಳಿಗ್ಗೆ 5 ರವರೆಗೆ ಎಂದು ಅದನ್ನು ಬದಲಾಯಿಸಿ, ಕರ್ಫ್ಯೂ ಅವಧಿಯನ್ನೂ ಸಹ ಎರಡು ಘಂಟೆಗಳ ಕಾಲ ಕಡಿತ ಗೊಳಿಸಿದರು. ನಂತರ ಇಷ್ಟಕ್ಕೆ ಸುಮ್ಮನಾಗದ ಯಡಿಯೂರಪ್ಪ, ಇನ್ನೇನು ಕೆಲವೇ ಘಂಟೆಗಳಲ್ಲಿ ಕರ್ಫ್ಯೂ ಶುರುವಾಗಬೇಕು ಎನ್ನುವಷ್ಟರಲ್ಲಿ ನೈಟ್ ಕರ್ಫ್ಯೂ ವನ್ನೇ ರದ್ದು ಮಾಡಿದರು!

ಯಡಿಯೂರಪ್ಪನವರ ಈ ಸರಣಿ ಗೊಂದಲದ ನಿರ್ಧಾರಗಳಿಗೆ ಕಾರಣ ಅವರ ಅಸಮರ್ಥತೆಗಿಂತಲೂ ಹೆಚ್ಚಾಗಿ ಅವರ ಮುಪ್ಪಿನತ್ತ ಬೆರಳು ಮಾಡುತ್ತಿದೆ. ಹಾಗು ತಮ್ಮ ಸರ್ಕಾರದ ಮೇಲೆ ಅವರಿಗೆ ಯಾವುದೇ ರೀತಿಯ ಹಿಡಿತವಿಲ್ಲ ಎಂಬುದೂ ಸಹ ಸ್ಪಷ್ಟಪಡಿಸುತ್ತಿದೆ. ವೃದ್ಧಾಶ್ರಮದಲ್ಲಿ ದೇವರ ಭಜನೆ ಮಾಡುತ್ತಾ, ಆಗೊಮ್ಮೆ ಈಗೊಮ್ಮೆ ಭೇಟಿ ನೀಡುವ ಮಕ್ಕಳ ಹುಟ್ಟುಹಬ್ಬಗಳ ಆಚರಣೆಯಲ್ಲಿ ಪಾಲ್ಗೊಳುತ್ತಾ, ವಿಶ್ರಾಂತಿ ಪಡೆಯಬೇಕಾಗಿರುವವರನ್ನು ವಿಧಾನ ಸೌಧದಲ್ಲಿ ರಾಜ್ಯ ಆಳಲು ಬಿಟ್ಟರೆ ಅರಾಜಕತೆ ತಲೆದೋರದೆ ಇರುತ್ತದೆಯೇ?

Leave a Reply