ಕುಮಾರಸ್ವಾಮಿ ಬರೆದ ಆ ಒಂದು ಪತ್ರದಿಂದ ಬೆಂಗಳೂರಿನ ಮಡಿಲಲ್ಲೇ ಉಳಿದುಕೊಂಡ ಏರೋ ಇಂಡಿಯಾ

ಸುಮಾರು ೧೩ ವರ್ಷಗಳಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ಪ್ರದರ್ಶನ ನಗರದ ಹಾಗು ರಾಜ್ಯದ ಒಂದು ಹಿರಿಮೆಯ ಗರಿ. ಭಾರತ ವಾಯು ಪಡೆಯ ಶಕ್ತಿ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ದೇಶದ ವಿವಿಧ ರಾಜ್ಯಗಳಿಂದ ಪ್ರತಿ ವರ್ಷ ಜನ ಮುಗಿಬೀಳುತ್ತಾರೆ. ನಾನಾ ರೀತಿಯ ಯುದ್ಧ ವಿಮಾನಗಳು ಘರ್ಜಿಸುತ್ತಾ ಸಾಹಸ ಪ್ರದರ್ಶಿಸುವುದನ್ನು ನೋಡುವುದೇ ಒಂದು ರೋಮಾಂಚಕ ಅನುಭವ. ಈ ವರ್ಷ ೫೨೩ ಭಾರತೀಯ ಹಾಗು ೭೮ ವಿದೇಶಿ ಕಂಪನಿಗಳು ಸೇರಿ ೬೦೧ ಪ್ರದರ್ಶನಕಾರರು ಪಾಲ್ಗೊಂಡಿದ್ದಾರೆ. ಅಲ್ಲದೆ ಬರೋಬರಿ ೧೪ ದೇಶಗಳು ಕೂಡ ಪಾಲ್ಗೊಳ್ಳುತ್ತಿವೆ. ಆದರೆ ೨೦೧೮ ರಲ್ಲಿ ಈ ಕಾರ್ಯಕ್ರಮವನ್ನು ಉತ್ತರ ಪ್ರದೇಶ ಅಥವಾ ಗೋವಾ ರಾಜ್ಯಕ್ಕೆ ಸ್ಥಳಾಂತರಿಸಲು ಕೇಂದ್ರ ಸರ್ಕಾರ ಯೋಚಿಸುತಿತ್ತು. ಅದನ್ನು ತಡೆದು ಏರೋ ಇಂಡಿಯಾ ಕಾರ್ಯಕ್ರಮ ಬೆಂಗಳೂರಿನಲ್ಲೇ ಮುಂದುವರಿಯುವಂತೆ ನೋಡಿಕೊಂಡಿದ್ದು ಅಂದಿನ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ.

ಪ್ರತಿಷ್ಠಿತ ಏರೋ ಇಂಡಿಯಾ ಕಾರ್ಯಕ್ರಮ ಬೆಂಗಳೂರಿನಲ್ಲೇ ಜನನ ಹೊಂದಿದ್ದು, ಅದು ಕೈ ತಪ್ಪಿ ಹೋಗುವ ಮುನ್ಸೂಚನೆ ಸಿಕ್ಕ ತಕ್ಷಣವೇ ಕುಮಾರಸ್ವಾಮಿ ಅವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದರು.

ರಕ್ಷಣಾ ಮತ್ತು ವಾಯುಯಾನ ಕ್ಷೇತ್ರಕ್ಕೆ ಪ್ರಮುಖ ಸ್ಥಳವಾಗಿರುವ ಬೆಂಗಳೂರು ಈ ಕಾರ್ಯಕ್ರಮವನ್ನು ಆಯೋಜಿಸಲು ಸೂಕ್ತ ಸ್ಥಳ. ಈ ಕಾರ್ಯಕ್ರಮವು ಸುಗಮವಾಗಿ ನಡೆಯಲೆಂದು ನಗರದಲ್ಲಿ ರಸ್ತೆ, ಟ್ರಾಫಿಕ್ ನಿಯಂತ್ರಣ, ಸಾರ್ವಜನಿಕ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಬೆಂಗಳೂರು ನಗರಕ್ಕೆ ಈ ಕಾರ್ಯಕ್ರಮ ಆಯೋಜಿಸುವಲ್ಲಿ ಉತ್ತಮ ಅನುಭವವು ಹೊಂದಿದೆ. ಅಲ್ಲದೆ ನಗರದ ಉತ್ತಮ ಹವಾಮಾನದ ಅನುಕೂಲವೂ ಪಡೆದುಕೊಂಡಿದೆ. ಆದ್ದ ಕಾರಣ ಏರೋ ಇಂಡಿಯಾ ಕಾರ್ಯಕ್ರಮವನ್ನು ಬೆಂಗಳೂರಿನಲ್ಲೇ ನಡೆಸಲು ಅವಕಾಶ ಕಲ್ಪಿಸಿಕೊಡಬೇಕೆಂದು ಕುಮಾರಸ್ವಾಮಿ ಅವರು ಪ್ರಧಾನಿಗಳಿಗೆ ಬರೆದ ಪತ್ರದಲ್ಲಿ ಉಲ್ಲೇಖಿತವಾಗಿದೆ.

ಆದ್ದರಿಂದ ಏರೋ ಇಂಡಿಯಾ ಕಾರ್ಯಕ್ರಮ ಬೆಂಗಳೂರಿನ ಮಡಿಲಲ್ಲೇ ಉಳಿದುಕೊಳ್ಳುವಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಪ್ರಮುಖ ಪಾತ್ರವಹಿಸಿದ್ದಾರೆ.

Leave a Reply