2023ರ ವಿಧಾನ ಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಟಕ್ಕರ್ ನೀಡಲು ಜೆಡಿಎಸ್ ಮಾಸ್ಟರ್ ಪ್ಲಾನ್!

ಮೈತ್ರಿ ಸರ್ಕಾರದ ಪತನದ ನಂತರ ಜೆಡಿಎಸ್ ಪಕ್ಷದಲ್ಲಿ ಕೊಂಚ ವೇಳೆ ಕಣ್ಮರೆಯಾಗಿದ್ದ ಹುರುಪು, ಛಲ ಈಗ ಮತ್ತೆ ಪ್ರಜ್ವಲಿಸಲಾರಂಭಿಸಿದೆ. ಪಕ್ಷದ ನಾವಿಕ ಹೆಚ್.ಡಿ ಕುಮಾರಸ್ವಾಮಿ ಅವರು ಜೆಡಿಎಸ್ ಪಕ್ಷ ರಾಜ್ಯದಲ್ಲಿ ಸ್ವತಂತ್ರವಾಗಿ ಆಡಳಿತದ ಲಗಾಮು ಹಿಡಿಯುವಂತೆ ಆಗಬೇಕು ಎಂಬ ತಮ್ಮ ಧ್ಯೇಯದತ್ತ ನಾಗಾಲೋಟದಲ್ಲಿ ದಣಿಯಲು ಈಗಾಲಿನಿಂದಲೇ ಪ್ರಾರಂಭಿಸಿದ್ದಾರೆ.

ನಮ್ಮ ನೆಲದ ಸ್ವಾದವನ್ನರಿಯದ ಉತ್ತರ ಭಾರತ ಕೇಂದ್ರಿತ ರಾಷ್ಟ್ರೀಯ ಪಕ್ಷಗಳ ಆಡಳಿತ ವೈಖರಿ ರಾಜ್ಯದ ಜನರು ಮುಖ ಸಿಂಡರಿಸುವಂತೆ ಮಾಡಿರುವುದು ಸುಳ್ಳಲ್ಲ. ಬದಲಾವಣೆ ರಾಜ್ಯದ ಕದ ಬಡಿಯಲೆಂದು ಜನರು ಕಾಯುತ್ತಿರುವ ಈ ಸನ್ನಿವೇಶವನ್ನು ಸದುಪಯೋಗ ಪಡಿಸಿಕೊಳ್ಳುವುದು ದಳಪತಿಗಳ ಪ್ರಮುಖ ಗುರಿ. ಸದರಿ ನಾಯಕರು ಸರಣಿ ಸಭೆ ಸಮಾರಂಭಗಳನ್ನು ಆಯೋಜಿಸಿ ರಾಜ್ಯದ ಜನರೊಡನೆ ತಮ್ಮ ಪಕ್ಷಕ್ಕೆ ಒಂದು ಅವಕಾಶವನ್ನು ನೀಡುವಂತೆ ನ್ಯಾಯಸಮ್ಮತವಾಗಿ ಕೇಳಿಕೊಳ್ಳುತ್ತಿದ್ದು, ಕೃಷಿ ಸಾಲ ಮನ್ನಾ ಸೇರಿದಂತೆ ಪಕ್ಷ ರೂಪಿಸಿರುವ ಪಂಚರತ್ನ ಕಲ್ಪನೆಯನ್ನು ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಳ್ಳಲಾಗುತ್ತಿದೆ.

ಪಂಚರತ್ನ ಯೋಜನೆ ಹೆಚ್.ಡಿ.ಕೆ ಅವರ ಕಲ್ಪನೆಯಾಗಿದ್ದು ರಾಜ್ಯದಲ್ಲಿ ವಸತಿ, ಶಿಕ್ಷಣ, ಅರೋಗ್ಯ, ಉದ್ಯೋಗ ಮತ್ತು ಕೃಷಿ ಕ್ಷೇತ್ರದಲ್ಲಿ ಮಹತ್ವದ ಅಭಿವೃದ್ಧಿ ಮತ್ತೆ ಸುಧಾರಣೆ ಒದಗಿಸುವುದು ಇದರ ತಿರುಳಾಗಿದೆ. ತಮ್ಮ ಐದು ವರ್ಷದ ಆಡಳಿತಾವಧಿಯಲ್ಲಿ ಪ್ರತಿ ವರ್ಷ ಒಂದು ಕ್ಷೇತ್ರದ ಮೇಲೆ ಸಂಪೂರ್ಣ ನಾಭಿಕರಿಸಲಾಗುತ್ತದೆ ಎಂದು ಘೋಷಿಸಿದ್ದಾರೆ.

ಪಕ್ಷದಲ್ಲಿ ಸದಸ್ಯರುಗಳ ನಡುವಿನ ಕ್ಷುಲ್ಲಕ ಮನಸ್ತಾಪಗಳನ್ನು ಬಗೆಹರಿಸಿ, ಭೂತ್ ಮಟ್ಟದಿಂದ ಪಕ್ಷ ಸಂಘಟನೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಹಾಗು ಮುಂದಿನ ಅಭ್ಯರ್ಥಿಗಳನ್ನು ಮುಂಚಿತವಾಗಿಯೇ ಆಯ್ಕೆ ಮಾಡುವ ಪ್ರಕ್ರಿಯೆ ಕಡೆಯೂ ಗಮನ ಹರಿಸಲಾಗುತ್ತಿದೆ. ಅಲ್ಲದೆ ಯುವಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿಗಳನ್ನು ಆರಿಸಲು ಕ್ರಮ ಕೈಗೊಳ್ಳುತ್ತಿರುವುದಾಗಿ ಪ್ರಸ್ತಾಪಿಸಿದ್ದರು.

ನಮ್ಮ ನಾಡು, ನೆಲ, ಜಲ ಮತ್ತು ಭಾಷೆಯ ಕುರಿತು ರಾಜ್ಯದ ಜನರಲ್ಲಿ ಅಭದ್ರತೆ ಕವಿದಿರುವ ಈ ಸಂದರ್ಭದಲ್ಲಿ ಒಂದು ದಿಟ್ಟ ಪ್ರಾದೇಶಿಕ ಪಕ್ಷ ಅತ್ಯವಶ್ಯಕ. ಈ ಸ್ಥಾನವನ್ನು ತುಂಬಲು ಜೆಡಿಎಸ್ ಪಕ್ಷವು ಸರ್ವ ಸಿದ್ದತೆಯನ್ನು ಮಾಡಿಕೊಳ್ಳುತ್ತಿರುವುದು ನಿರಾಳದ ಸುದ್ದಿ.

Leave a Reply