ಒಂದು ಗುರಿ ಇಟ್ಟುಕೊಂಡು ಸಕ್ರಿಯವಾಗಿ ಕೆಲಸ ಮಾಡಿ ಯಶಸ್ಸು ಕಾಣುತ್ತೀರಾ: ಕಾರ್ಯಕರ್ತರನ್ನು ಹುರಿದುಂಬಿಸಿದ ಹೆಚ್.ಡಿ.ಕೆ

ಇಂದು ಬೆಂಗಳೂರಿನ ಜನತಾ ದಳ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ರಾಜ್ಯದ ನಾನಾ ಜಿಲ್ಲೆಗಳ ಸ್ಥಳೀಯ ಮುಖಂಡರನ್ನು ಕರೆಸಿ ಸಂಘಟನಾ ಸಭೆ ನಡೆಸಲಾಯಿತು. ಸಭೆಯಲ್ಲಿ ಕುಮಾರಸ್ವಾಮಿ ಅವರು ಪಕ್ಷ ಸಂಘಟನೆಯನ್ನು ಮತ್ತಷ್ಟು ಚುರುಕುಗೊಳಿಸಲು ಹಾಗು ಪರಿಣಾಮಕಾರಿಯಾಗಿ ಮಾಡುವುದರ ಬಗ್ಗೆ ಕಾರ್ಯಕರ್ತರೊಂದಿಗೆ ಚರ್ಚಿಸಿದರು.

ಚರ್ಚೆಯಾದ ಪ್ರಮುಖ ಸಂಗತಿಗಳಲ್ಲಿ ಪಕ್ಷದಲ್ಲಿ ಮಹಿಳೆಯರಿಗೆ ಆದ್ಯತೆ ಹೆಚ್ಚಿಸುವುದರ ಕುರಿತು ಒಂದಾಗಿತ್ತು. ಪಕ್ಷ ಸಂಘಟನಾ ಚಟುವಟಿಕೆಗಳಲ್ಲಿ ವಿದ್ಯಾವಂತ ಹಾಗು ಬುದ್ದಿವಂತ ಮಹಿಳೆಯರ ಭಾಗವಹಿಕೆಯನ್ನು ಹೆಚ್ಚಿಸಬೇಕು. ಇದರ ಮೂಲಕ ಮಹಿಳಾ ಮತದಾರರ ನಂಬಿಕೆ ಗಳಿಸಲು ಯತ್ನಿಸಬೇಕು ಎಂದು ಹೇಳಿದರು. ಅಲ್ಲದೆ ತಾವು ಮಹಿಳೆಯರಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ರೂಪುಗೊಳಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರುವುದಾಗಿಯೂ ಪ್ರಸ್ತಾಪಿಸಿದರು.

ನಂತರ ಕಾರ್ಯಕರ್ತರನ್ನು ಹುರಿದುಂಬಿಸುವ ಉದ್ದೇಶದಿಂದ ಅವರುಗಳಿಗೆ ಒಂದಷ್ಟು ಕಿವಿ ಮಾತುಗಳನ್ನು ಹೇಳಿದರು. ರಾಜ್ಯದಲ್ಲಿ ನಾಯಕತ್ವದ ಕೊರತೆಯಿದೆ. ರಾಜ್ಯದ ಹಿತದೃಷ್ಟಿಯಿಂದ ನಾವು ನಾಯಕರನ್ನು ತಯಾರಿಸಬೇಕಾಗಿದೆ. ಬೆಂಗಳೂರಿನ ಕಚೇರಿಯಿಂದ ನಾಯಕರು ಉದ್ಭವರಾಗುವುದಿಲ್ಲ. ಕಾರ್ಯಕರ್ತರಿಂದ ನಾಯಕರು ಉದ್ಭವರಾಗಬೇಕು ಎಂದು ಹೇಳಿದರು.

ಕಾರ್ಯಕರ್ತರನ್ನು ಪಕ್ಷದ ಬೆಳವಣಿಗೆಗೆ ಶ್ರಮಿಸಲು ಪ್ರೋತ್ಸಾಹಿಸುವ ಸಲುವಾಗಿ ತಾವು ಹೇಗೆ ಜೆಡಿಎಸ್ ಪಕ್ಷ ಸಂಘಟನೆ ಇಲ್ಲದ ರಾಮನಗರ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರನ್ನು ೯ ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಲ್ಲಿ ಗೆಲುವು ಸಾಧಿಸಲು ದಣಿದರು ಎಂಬುದರ ಬಗ್ಗೆ ಹೇಳಿದರು. ಆದ್ದರಿಂದ ಒಂದು ಗುರಿ ಇಟ್ಟುಕೊಂಡು ಸಕ್ರಿಯವಾಗಿ ಕೆಲಸ ಮಾಡಿ ಯಶಸ್ಸು ಕಾಣುತ್ತೀರಾ ಎಂದು ಹೇಳಿ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದರು.

Leave a Reply