ರೈತ ಹೋರಾಟಗಾರರಿಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಮಹತ್ವದ ಸಲಹೆ

ಇಂದು ರಾಯಚೂರಿನಲ್ಲಿ “ದೇವೇಗೌಡರ ನಡೆ ದೇವದುರ್ಗ ಸ್ವಾಭಿಮಾನಿ ರೈತರ ಕಡೆ” ಎಂಬ ಘೋಷಣೆಯೊಂದಿಗೆ ಸಜ್ಜಾದ ಜೆಡಿಎಸ್ ಬೃಹತ್ ಸಮಾವೇಶದಲ್ಲಿ ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ.ದೇವೇಗೌಡರು ಭಾಗವಹಿಸಿದರು. ನಂತರ ಸುದ್ದಿಘೋಷ್ಠಿಯಲ್ಲಿ ಭಾಗವಹಿಸಿದ ಮುತ್ಸದಿ ನಾಯಕರು ದೇಶದ ಹಲವು ವಿಷಯಗಳನ್ನು ಪ್ರಸ್ತಾಪಿಸಿದರು.

ದೇವೇಗೌಡರು ಮಾತನಾಡಿದ ಪ್ರಮುಖ ವಿಷಯಗಳಲ್ಲಿ ಹಲವು ತಿಂಗಳುಗಳಿಂದ ನಡೆಯುತ್ತಿರುವ ರೈತರ ಹೋರಾಟವು ಒಂದು. ಇದರ ಕುರಿತು ಗೌಡರು: “ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಪ್ರತಿಷ್ಠೆ ಆಗಬಾರದು. ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ರೈತರಿಗೆ ನೋವು ಹೇಳಿಕೊಳ್ಳುವ ಸ್ವಾತಂತ್ರ್ಯ ಇದೆ. ಚಳಿಲೆಕ್ಕಿಸದೆ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಕೇಂದ್ರ ಸರ್ಕಾರ ಅವಸರದಲ್ಲಿ ಬಿಲ್ ಪಾಸ್ ಮಾಡಬಾರದಿತ್ತು. ಕೃಷಿ ಮಸೂದೆಗೆ ಎರಡ್ಮೂರು ತಿಂಗಳ ಕಾಲಾವಕಾಶ ತಗೊಳ್ಳಿ. ರೈತರು 11 ಸಭೆಗಳಲ್ಲಿ ಶಾಂತಿಯುತವಾಗಿ ಭಾಗವಹಿಸಿದ್ದಾರೆ.ಗಣರಾಜ್ಯೋತ್ಸವ ದಿನದಂದು ನಡೆದ ಗಲಭೆಗೆ ಯಾರು ಕಾರಣ ಎಂಬುದು ತನಿಖೆ ನಡೆದಿದೆ ಎಂದರು.
ಖಲಿಸ್ತಾನ, ವಿದೇಶಿ ಹಣ ಬಂದಿತ್ತು ಎನ್ನುವ ಊಹಾಪೋಹಕ್ಕೆ‌ ನಾನು ಉತ್ತರ ಕೊಡುವುದಿಲ್ಲ. ಗೃಹ ಸಚಿವಾಲಯ ಈ ಬಗ್ಗೆ ತನಿಖೆ ಮಾಡುತ್ತಿದ್ದು, ಅದರ ವರದಿ ಆಧರಿಸಿ ಮತ್ತೆ ಮಾತನಾಡುತ್ತೇನೆ” ಎಂದು ಹೇಳಿದರು.

ರಾಜ್ಯದಲ್ಲಿ ನಡೆಯುತ್ತಿರುವ ಮೀಸಲಾತಿ ಹೋರಾಟದ ಕುರಿತು ಮಾತನಾಡಿ, ಈ‌ ಬಗ್ಗೆ‌ ಸಿದ್ದರಾಮಯ್ಯ ಅವರಿಗೆ ಉತ್ತಮ ಮಾಹಿತಿ ಇದೆ. ಅವರೇ ಮಾತನಾಡುತ್ತಾರೆ ಎಂದು ವ್ಯಂಗ್ಯವಾಡಿದರು.

ನಂತರ “ರಾಜ್ಯದ ಬೆಳಗಾವಿ ಲೋಕಸಭಾ, ಮಸ್ಕಿ, ಸಿಂಧಗಿ ಹಾಗೂ ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದಿಲ್ಲ. ನಮ್ಮ ಬಳಿ ಚುನಾವಣೆಗೆ ಹಣ ಇಲ್ಲ. ಬೆಳಗಾವಿ ಲೋಕಸಭೆ, ಮಸ್ಕಿ, ಸಿಂಧಗಿ ಹಾಗೂ ಬಸವ ಕಲ್ಯಾಣದಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಹಾಕುವುದಿಲ್ಲ” ಎಂದು ಹೇಳಿದರು.

2023 ರಲ್ಲಿ ರಾಜ್ಯದಲ್ಲಿ ಚುನಾವಣೆ ಎದುರಾಗಲಿದೆ. ಪಕ್ಷ ಕಟ್ಟುವುದಕ್ಕಾಗಿ ನಾನು ಸಂಪೂರ್ಣ ಭಾಗಿಯಾಗುತ್ತೇನೆ. ಕುಮಾರಸ್ವಾಮಿ ಸರ್ಕಾರ ಮುಗಿದ ಮೇಲೆ ನಾನ್ಯಾರಿಗೂ ನಿಂದನೆ ಮಾಡಿಲ್ಲ. ಪ್ರಾದೇಶಿಕ ಪಕ್ಷ ಕಟ್ಟುವುದಕ್ಕೆ ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ ಎಂದು ಮಾಜಿ ಪ್ರಧಾನ ಮಂತ್ರಿ ತಿಳಿಸಿದರು

ಇದರ ಜೊತೆಗೆ ನಾಲ್ಕು ರಾಜ್ಯಗಳಲ್ಲಿನ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನೆಡೆಯಾಗಲಿದೆ. ತಮಿಳುನಾಡಿನಲ್ಲಿ ಬಿಜೆಪಿ ಗೆ ಹೆಚ್ಚು ಸ್ಥಾನ ಸಿಗಲ್ಲ ಎಂಬ ಭಾವನೆಯಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಧೈರ್ಯ ಮೆಚ್ಚುವಂತದ್ದು, ಮತಗಳು ಕಡಿಮೆ ಬಂದರೂ ಈ ಬಾರಿ ಮಮತಾ ಮತ್ತೆ ಅಧಿಕಾರ ಪಡೆಯಬಹುದು.ಇಡೀ ಬಿಜೆಪಿ ಟೀಮ್ ಪಶ್ಚಿಮ ಬಂಗಾಳದಲ್ಲಿ ನೆಲೆಯೂರಿದೆ. ಸಚಿವರು, ಶಾಸಕರು ಪಕ್ಷ ಬಿಟ್ಟಿರೋದು ಸ್ವಲ್ಪ ಹಿನ್ನೆಡೆಯಾಗಬಹುದು.ಆದ್ರೆ ಮೂರನೇ ಬಾರಿಯೂ ಮಮತಾ ಬ್ಯಾನರ್ಜಿ ಸಿಎಂ ಆಗಲಿದ್ದಾರೆ ಎಂದು ಮುಂಬರುವ ಚುನಾವಣೆಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

Leave a Reply