ನೂತನ ಪಾರ್ಕಿಂಗ್ ನೀತಿ : ಲಾಕ್ ಡೌನ್ ನಿಂದ ಚೇತರಿಸಿಕೊಳ್ಳುತ್ತಿರುವ ಜನರ ಗಾಯದ ಮೇಲೆ ಬರೆ ಎಳೆದಂತೆ

ಈಗಾಗಲೇ ದಿನದಿಂದ ದಿನ ಆದ್ಯಂತವಾಗಿ ಏರುತ್ತಿರುವ ಬೆಲೆ ಸಾಮಾನ್ಯ ವರ್ಗದ ಜನರ ಬಿಪಿ ಶುಗರ್ ಹೆಚ್ಚಿಸುತ್ತಿದೆ. ಪೆಟ್ರೋಲ್ ಬೆಲೆ 90 ರ ಗಡಿ ದಾಟುತ್ತಿದ್ದರೆ, ಅಗತ್ಯ ವಸ್ತುಗಳ ಬೆಲೆ ಗಗನ ಮುಟ್ಟುತ್ತಿದೆ. ಅಲ್ಲದೆ ಈಗಷ್ಟೇ ಕೋರೋನಾ ವೈರಾಣು ಹರಡುವಿಕೆಯನ್ನು ತಡೆಯಲು ಜಾರಿಗೊಳಿಸಿದ್ದ ಲಾಕ್ ಡೌನ್ ನಿಂದ ಸಾಕಷ್ಟು ಜನರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡು ಆರ್ಥಿಕ ಹಿಂಜರಿತೆಯನ್ನು ಅನುಭವಿಸುತ್ತಿದ್ದಾರೆ. ಇದರಿಂದ ಚೇತರಿಸಿಕೊಳ್ಳುವಷ್ಟರಲ್ಲೇ ಕೇಂದ್ರ ಹಾಗು ರಾಜ್ಯ ಸರ್ಕಾರ ತಮ್ಮ ಬೊಕ್ಕಸ ತುಂಬಿಸಿಕೊಳ್ಳಲು ಬೆಲೆ ಏರಿಕೆ ಮಾಡುತ್ತಿರುವುದು ದುರಾಡಳಿತವೇ ಸರಿ ಎಂದು ಗೊಣಗುತ್ತ ನಮ್ಮ ನಮ್ಮ ಜೇವನವನ್ನು ಹೇಗೋ ನಡೆಸಿಕೊಳ್ಳುತ್ತಾ ಇರುವಾಗಲೇ ರಾಜ್ಯ ಬಿಜೆಪಿ ಸರ್ಕಾರ ನಮ್ಮನ್ನು ಸುಲಿಗೆ ಮಾಡಲು ಮತ್ತೊಂದು ರಣ ತಂತ್ರ ರೂಪಿಸಿಕೊಂಡಿದೆ! ಅದೇ ನೂತನ ಪಾರ್ಕಿಂಗ್ ನೀತಿ.

ರಾಜ್ಯ ಸರ್ಕಾರ ಬೆಂಗಳೂರು ನಗರಕ್ಕೆ ಅಳವಡಿಸಲು ಹೊರಟಿರುವ ನೂತನ ಪಾರ್ಕಿಂಗ್ ವ್ಯವಸ್ಥೆಯ ಪ್ರಕಾರ ನಾವು ಬೆವರು ಸುರಿಸಿ, ಸಾಲ ಮಾಡಿ ಖರೀದಿಸಿದ ಕಾರುಗಳನ್ನು ನಮ್ಮ ಮನೆಗಳ ಮುಂದೆ ನಿಲ್ಲಿಸುವಂತೆ ಇಲ್ಲ. ನಿಲ್ಲಿಸಿದರೆ ಸಾವಿರಾರು ರೂಪಾಯಿಗಳ ದಂಡ ವಿಧಿಸಲಾಗುತ್ತದೆ. ಪರ್ಯಾಯವಾಗಿ ಸ್ಥಳೀಯ ಪ್ರಾಧಿಕಾರಗಳು ಕಲ್ಪಿಸುವ ಪಾರ್ಕಿಂಗ್ ವ್ಯವಸ್ಥೆಯಲ್ಲೇ ನಮ್ಮ ವಾಹನಗಳನ್ನು ಪಾರ್ಕ್ ಮಾಡಬೇಕು. ಆದರೆ ಇದು ಸಹಿತ ಉಚಿತವೇನಲ್ಲ. ಒಂದು ಕಾರ್ ಪಾರ್ಕ್ ಮಾಡಲು ಬರೋಬರಿ 5000 ರೂಪಾಯಿಗಳನ್ನು ಪಾವತಿಸಬೇಕು! ಪಾವತಿಸದ ಮೇಲು ಸಹ ನಿಮಗೆ ಸ್ಥಳೀಯ ಪ್ರಾಧಿಕಾರಗಳು ಕಲ್ಪಿಸುವ ಪಾರ್ಕಿಂಗ್ ಸ್ಥಳದಲ್ಲಿ ಒಂದು ಜಾಗ ನೀಡುವುದಿಲ್ಲ. ಅಲ್ಲಿ ಜಾಗ ಉಳಿದಿದ್ದರೆ ಮಾತ್ರ ನಾವು ಅಲ್ಲಿ ನಮ್ಮ ವಾಹನವನ್ನು ಪಾರ್ಕ್ ಮಾಡಬಹುದು.

ಈ ನೀತಿಯ ಉದ್ದೇಶ ಬೆಂಗಳೂರಿನ ವಸತಿ ಪ್ರದೇಶಗಳ ರಸ್ತೆಗಳಲ್ಲಿ ವಾಹನಗಳ ನಿಲ್ಲುವಿಕೆಯನ್ನು ಕಡಿಮೆ ಮಾಡಬೇಕು ಹಾಗು ಸಾರ್ವಜನಿಕ ಸಾರಿಗೆಯತ್ತ ಜನರ ಒಲವನ್ನು ಹೆಚ್ಚಿಸಬೇಕು ಎಂದಿದ್ದರೂ ಸಹ, ಇದರ ಅಳವಡಿಕೆಯ ರೀತಿ ಸರಿ ತೂಗುತ್ತಿಲ್ಲ. ಈ ಕಷ್ಟ ಕಾಲದಲ್ಲಿ ಈ ನಿಯಮದ ಅಗತ್ಯವೂ ಇಲ್ಲ. ಹಾಗಾದಮೇಲೆ ಇದು ಜನರನ್ನು ಸುಲಿಗೆ ಮಾಡುವ ದಾರಿಯಲ್ಲದೆ ಮತ್ತಿನ್ನೇನು?

Leave a Reply