ರಾಜ್ಯದಲ್ಲಿ ಗೂಂಡಾಗಿರಿ ಮೆರೆಯುತ್ತಿರುವ ಹಿಂದೂ ಜಾಗೃತಿ ಸೇನೆ; ಬಿಜೆಪಿಯಿಂದ ಕುಮಕ್ಕು?

ಮಹಾರಾಷ್ಟ್ರದಲ್ಲಿ ಶಿವ ಸೇನೆ ಪಕ್ಷದ ಗೂಂಡಾಗಳು ಪ್ರೇಮಿಗಳ ದಿನವನ್ನು ಆಚರಿಸುವ ಪ್ರೇಮಿಗಳ ಮೇಲೆ ಹಲ್ಲೆ ಮಾಡುವ ಭಯಾನಕ ಸಂಗತಿಯನ್ನು ಪ್ರತಿ ವರ್ಷ ಕೇಳುತ್ತಿರುತ್ತೇವೆ. ಆದರೆ ಈಗ ಕರ್ನಾಟಕದಲ್ಲೂ ಇಂತಹದ್ದೇ ಮತ್ತೊಂದು ಫಾಸಿವಾದಿ ಹಿಂದೂ ಜಾಗೃತಿ ಸೇನೆ ಜನರಿಗೆ ಬಹಿರಂಗವಾಗಿ ಬೆದರಿಕೆ ಹಾಕುವ ಮೂಲಕ ಗೂಂಡಾಗಿರಿ ಮೆರೆದಿದೆ.

ಪ್ರೇಮಿಗಳ ದಿನವನ್ನು ಯಾರೂ ಸಹ ಆಚರಿಸಬಾರದು. ಒಂದು ವೇಳೆ ನಮ್ಮ ಆದೇಶ ಮೀರಿ ಯಾರಾದರೂ ಆಚರಿಸಿದರೆ ಅಂತ ಪ್ರೇಮಿಗಳಿಗೆ ಬಲವಂತವಾಗಿ ಮದುವೆ ಮಾಡಿಸುತ್ತೇವೆ. ಇದಕ್ಕೆ ಎಲ್ಲಾ ರೀತಿಯ ಸಿದ್ಧತೆ ನೆಡೆಸಿದ್ದೇವೆ ಎಂದು ಹಿಂದೂ ಜಾಗೃತಿ ಸೇನೆ ಬಹಿರಂಗವಾಗಿ ರಾಜ್ಯದ ಜನರಿಗೆ ಬೆದರಿಕೆ ಹಾಕಿದೆ. ಕರ್ನಾಟಕ ರಾಜ್ಯದಲ್ಲಿ ಇಂತಹ ಆಘಾತಕಾರಿ ಬೆಳವಣಿಗೆಗೆ ಕಾರಣವಾದರು ಏನು?

ಮೊದಲನೆಯದಾಗಿ ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದಿರುವುದು. ಹೌದು, ಬಿಜೆಪಿ ಪಕ್ಷ ಎಲ್ಲರಿಗೂ ಅರಿತಿರುವಂತೆ ಒಂದು ಕೋಮುವಾದಿ ಪಕ್ಷ. ಬಿಜೆಪಿ ಅಧಿಕಾರದಲ್ಲಿರುವ ಎಲ್ಲಾ ರಾಜ್ಯಗಳಲ್ಲೂ ಕೋಮು ಗಲಭೆ ಅತಿರೇಕಕ್ಕೆ ಏರಿದೆ. ಆದ್ದರಿಂದ ಬಿಜೆಪಿ ಅಧಿಕಾರ ಹಿಡಿಯುವ ಎಲ್ಲಾ ರಾಜ್ಯಗಳಲ್ಲೂ ಸೌಹಾರ್ದತೆ ನಶಿಸಿ ಹೋಗುವುದಂತೂ ಕಟ್ಟಿಟ್ಟ ಬುತ್ತಿ. ಈಗ ಕರ್ನಾಟಕ ರಾಜ್ಯದಲ್ಲೂ ಬಿಜೆಪಿ ಪಕ್ಷ ಅಧಿಕಾರದಲ್ಲಿರುವುದರಿಂದ ಹಿಂದೂ ಧರ್ಮದ ಹೆಸರಿನಲ್ಲಿ ಜನರ ಮೂಲಭೂತ ಹಕ್ಕುಗಳಿಗೆ ಧಕ್ಕೆಯುಂಟು ಮಾಡುವ ಹಲವು ಸಂಘಗಳಿಗೆ ಸೊಪ್ಪು ಹಾಕಿದಂತ್ತಾಗಿದ್ದು ಇವರುಗಳು ಗೂಂಡಾಗಿರಿ ಮೆರೆಯುತ್ತಿದ್ದಾರೆ.

ಎರಡನೆಯದಾಗಿ, ಹಿಂದೂ ಧರ್ಮದ ಬಗ್ಗೆ ಈ ಗೂಂಡಾಗಳಿಗಿರುವ ತಪ್ಪು ಕಲ್ಪನೆಗಳು. ಹಿಂದೂ ಧರ್ಮವು ಇತರೆ ಧರ್ಮಗಳನ್ನು ಅಥವಾ ಇತರೆ ಸಂಸ್ಕೃತಿಗಳನ್ನು ಅಗೌರಿಸುವಂತಹ ಸಂಗತಿಗಳನ್ನು ಎಂದೂ ಸಾರಿಲ್ಲ. ಅಲ್ಲದೆ ಋಗ್ ವೇದ ಸಂಹಿತವೊಂದು : ಸತ್ಯವು ಒಂದೇ, ಆದರೆ ಜ್ಞಾನಿಗಳು ಅದನ್ನು ಹಲವು ಎಂದು ತಿಳಿದಿದ್ದಾರೆ; ದೇವರು ಒಬ್ಬನೇ, ಆದರೆ ನಾವು ಆತನನ್ನು ಅನೇಕ ವಿಧಗಳಲ್ಲಿ ಸಂಪರ್ಕಿಸಬಹುದು ಎಂದು ಹೇಳುತ್ತದೆ. ಇದರಿಂದ ಹಿಂದೂ ಧರ್ಮವೂ ಇತರೆ ಧರ್ಮ ಅಥವಾ ಸಂಸ್ಕೃತಿಗಳನ್ನು ಎಂದೂ ಸಹ ಅಲ್ಲಗಳಿಸಿಲ್ಲ ಎಂದು ಹಾಗು ಈ ಸ್ವಯಂ ಘೋಷಿತ ಹಿಂದೂ ಸಮರಕ್ಷಕರಿಗೆ ಹಿಂದೂ ಧರ್ಮದ ಬಗ್ಗೆ ಎಷ್ಟರ ಮಟ್ಟಿಗೆ ಅರಿವಿದೆ ಎಂಬುದನ್ನು ತಿಳಿಯಬಹುದು.

ಕೊನೆಯದಾಗಿ, ಭಾರತ ಸಂವಿಧಾನದ ಬಗ್ಗೆ ಈ ಗೂಂಡಾಗಳಿಗಿರುವ ಅಗೌರವ! ಭಾರತದ ಸಂವಿಧಾನವು ವಿವಿಧತೆಯಲ್ಲಿ ಏಕತೆ ಎಂಬ ಪ್ರೌಢ ಸಂದೇಶವನ್ನು ಸಾರುತ್ತದೆ. ಆದರೆ ಈ ಗೂಂಡಾಗಳಿಗೆ ಇದರ ಅರಿವಿದೆಯೋ ಅಥವಾ ಅರಿವಿದ್ದು ಅದನ್ನು ಅಗೌರವಿಸುತ್ತಿದ್ದರೋ ತಿಳಿಯದು. ಆದ್ದರಿಂದ ಪ್ರೇಮಿಗಳ ದಿನಾಚರಣೆ ಪಾಶ್ಚ್ಯಾತ ಸಂಸ್ಕೃತಿ, ಭಾರತೀಯರು ಅದನ್ನು ಆಚರಿಸಬಾರದು ಎಂದು ಹಿಂದೂ ಜಾಗೃತಿ ಸೇನೆಯಾಗಲಿ ಅಥವಾ ಇದೇ ನಂಬಿಕೆಗೆ ಬದ್ಧರಾಗಿರುವ ಬೇರೆ ಸಂಘಗಳಾಗಲಿ ಪ್ರತಿಪಾದಿಸುತ್ತಿರುವುದು ಮೌಢ್ಯತೆಯ ಅತಿರೇಕವೇ ಸರಿ.

ಪ್ರೇಮಿಗಳ ದಿನವನ್ನು ಆಚರಣೆಯ ಬಗ್ಗೆ ಭಾರತದ ಕಾನೂನು ಯಾವುದೇ ನಿಯಮವನ್ನು ರೂಪಿಸಿಲ್ಲ. ಆದ್ದರಿಂದ ಪ್ರತಿಯೊಬ್ಬ ನಾಗರಿಕನಿಗೂ ಪ್ರೇಮಿಗಳ ದಿನವನ್ನು ಆಚರಿಸುವ ಹಕ್ಕಿದೆ. ಇದರ ವಿರುದ್ಧ ಗೂಂಡಾಗಿರಿ ನಡೆಸಿ ಜನರಲ್ಲಿ ಆತಂಕ ಹುಟ್ಟುಹಾಕುತ್ತಿರುವವರ ವಿರುದ್ಧ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕು. ಆದರೆ ಈ ಸರ್ಕಾರದಲ್ಲಿ ಅದು ಕನಸೇ ಎಂಬುದು ವಿಪರ್ಯಾಸದ ಸಂಗತಿ.

Leave a Reply