ಸಿದ್ದರಾಮಯ್ಯ ಅನ್ನೋ ಮೈಸೂರು ಹುಲಿಯನ್ನು ಕುಮಾರಣ್ಣ ಬೋನಿಗೆ ಹಾಕಿದ್ದಾರೆ – ಪ್ರತಾಪ್ ಸಿಂಹ

ಬುಧವಾರ ಮೇಯರ್ ಮತ್ತು ಉಪ ಮೇಯರ್ ಸ್ಥಾನಕ್ಕೆ ನಡೆದ ಮೈಸೂರು ಮಹಾನಗರ ಪಾಲಿಕೆ ಚುನಾವಣೆ ಬಾರಿ ಕುತೂಹಲ ಕೆರಳಿಸಿತ್ತು. ಇದಕ್ಕೆ ಕಾರಣ ಮೂರು ಪಕ್ಷಗಳಿಗೂ ಅಗತ್ಯ ಬಹುಮತ ಇಲ್ಲದೇ ಇದದ್ದು. ಎಂದಿನಂತೆ ಕಿಂಗ್ ಮೇಕರ್ ಸ್ಥಾನವನ್ನು ಅಲಂಕರಿಸಿದ ಜೆಡಿಎಸ್ ಪಕ್ಷವು ಯಾವ ಪಕ್ಷಕ್ಕೆ ಬೆಂಬಲ ನೀಡುತ್ತದೆ ಎಂಬ ಕುತೂಹಲ ಈ ಚುನಾವಣೆಯನ್ನು ಮತ್ತಷ್ಟು ರೋಚಕಗೊಳಿಸಿತ್ತು.

ಜೆಡಿಎಸ್ ಸದಸ್ಯೆ ರುಕ್ಮಿಣಿ ಮಾದೇಗೌಡ ಅವರು 43 ಮತಗಳನ್ನು ಪಡೆದು ಮೇಯರ್ ಆಗಿ ಆಯ್ಕೆ ಆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಅವರು ” ಸಿದ್ದರಾಮಯ್ಯರನ್ನು ಮೈಸೂರು ಭಾಗದ ಹುಲಿ ಎಂದು ಪರಿಗಣಿಸುತ್ತಾರೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ತಮ್ಮದೇ ಪಕ್ಷದ ಸದಸ್ಯರಿಗೆ ಮತ ಚಲಾಯಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಕುಮಾರಣ್ಣ ಆ ಹುಲಿಯನ್ನು ಬೋನಿಗೆ ಹಾಕಿದ್ದಾರೆ” ಎಂದು ಹೇಳಿದರು.

ಮೈಸೂರು ಮಹಾನಗರ ಪಾಲಿಕೆ ಚುನಾವಣೆ ಮೂರು ಪಕ್ಷಗಳಿಗೆ ಪ್ರತಿಷ್ಠೆಯ ವಿಷಯವಾಗಿತ್ತು. ಮೈಸೂರಿನ ಹುಲಿ ಎಂದೇ ಪ್ರಖ್ಯಾತರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ, ಹಳೇ ಮೈಸೂರು ಭಾಗದಲ್ಲಿ ಅಗಾಧ ಪ್ರಾಬಲ್ಯ ಸಾಧಿಸಿರುವ ಜೆಡಿಎಸ್ ಪಕ್ಷಕ್ಕೆ ಹಾಗು ಮೇಯರ್ ಆಗಿ ಮೊದಲ ಬಾರಿಗೆ ಆಯ್ಕೆ ಆಗುವ ಮೂಲಕ ತಮ್ಮ ಖಾತೆ ತೆರೆಯಲು ಕಾತುರರಾಗಿದ್ದ ಬಿಜೆಪಿ ಪಕ್ಷಕ್ಕೆ ಈ ಚುನಾವಣೆ ಅಗ್ರಗಣ್ಯದ್ದಾಗಿತ್ತು. ಆದರೆ ಕುಮಾರಸ್ವಾಮಿ ಈ ಚುನಾವಣೆಯಲ್ಲಿ ಮೇಯರ್ ಸ್ಥಾನವನ್ನು ತಮ್ಮ ಪಕ್ಷದ ಸದಸ್ಯರಿಗೆ ದಕ್ಕಿಸಿಕೊಡವಲ್ಲಿ ಹಾಗೂ ರಾಜಕೀಯದ ತಮ್ಮ ಇಬ್ಬರು ಪ್ರಮುಖ ಎದುರಾಳಿಗಳಾದ ಸಿದ್ದರಾಮಯ್ಯ ಹಾಗು ಸಿಎಂ ಯಡಿಯೂರಪ್ಪ ಅವರನ್ನು ಒಂದೇ ಬಾಣದಲ್ಲಿ ಸದೆಬಡಿದು ಮೇಲುಗೈ ಸಾಧಿಸುವಲ್ಲಿ ಸಫಲರಾಗಿದ್ದಾರೆ.

Leave a Reply